Saturday, April 25, 2026
Google search engine

Homeರಾಜಕೀಯಮೇ 4ರ ಮುಹೂರ್ತ : ಕರ್ನಾಟಕ ಕಾಂಗ್ರೆಸ್‌ ನಲ್ಲಿ ಮಹತ್ತರ ಬದಲಾವಣೆಯ ಸುಳಿವು!?

ಮೇ 4ರ ಮುಹೂರ್ತ : ಕರ್ನಾಟಕ ಕಾಂಗ್ರೆಸ್‌ ನಲ್ಲಿ ಮಹತ್ತರ ಬದಲಾವಣೆಯ ಸುಳಿವು!?

ಬೆಂಗಳೂರು : ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳ ಕಾವು ಮುಗಿಯುತ್ತಿದ್ದಂತೆಯೇ, ರಾಜ್ಯ ಕಾಂಗ್ರೆಸ್‌ ನಲ್ಲಿ ‘ಬಣ ರಾಜಕೀಯ’ ಮತ್ತೆ ಮುನ್ನಲೆಗೆ ಬಂದಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ಬಿರುಸಾಗಿದೆ.

ಸಿದ್ದರಾಮಯ್ಯ ಆಪ್ತರೊಂದಿಗೆ ‘ಡಿನ್ನರ್ ಮೀಟಿಂಗ್’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ಸಚಿವ ಬೈರತಿ ಸುರೇಶ್ ಅವರ ನಿವಾಸದಲ್ಲಿ ತಮ್ಮ ಆಪ್ತ ಸಚಿವರೊಂದಿಗೆ ಮಹತ್ವದ ಔತಣಕೂಟ ನಡೆಸಿದರು. ಈ ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಜಮೀರ್ ಅಹಮದ್ ಖಾನ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ಭಾಗಿಯಾಗಿದ್ದರು. ಸಂಪುಟ ಪುನಾರಚನೆಯ ಬೇಡಿಕೆ ಮತ್ತು ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಯ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಇಲ್ಲಿ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಮೊಕ್ಕಾಂ

ಇತ್ತ ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್ ನಡೆಯುತ್ತಿದ್ದರೆ, ಅತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈದರಾಬಾದ್‌ ನಿಂದ ನೇರವಾಗಿ ದೆಹಲಿಗೆ ತೆರಳಿರುವ ಅವರು, ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿ ನಾಯಕತ್ವದ ವಿಚಾರವನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಪಟ್ಟು ಹಿಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷಗಿರಿ ಮತ್ತು ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಬಲ್ಲ ಮೂಲಗಳಿಂದ ಲಭಿಸಿದೆ.

ಶಾಸಕರ ದೆಹಲಿ ಯಾತ್ರೆ ಮತ್ತು ಸಂಪುಟ ಪುನಾರಚನೆ

ರಾಜ್ಯದ ಉಪಚುನಾವಣೆಗಳು ಮುಗಿಯುತ್ತಿದ್ದಂತೆಯೇ 20ಕ್ಕೂ ಹೆಚ್ಚು ಹಿರಿಯ ಶಾಸಕರು ಈಗಾಗಲೇ ದೆಹಲಿಗೆ ತೆರಳಿ ಸಂಪುಟ ಪುನಾರಚನೆಗೆ ಬೇಡಿಕೆ ಇಟ್ಟಿದ್ದಾರೆ. “ಹಿರಿಯರಿಗೆ ಸಚಿವ ಸ್ಥಾನ ನೀಡಬೇಕು” ಎನ್ನುವುದು ಒಂದು ಗುಂಪಿನ ವಾದವಾದರೆ, “ನಾಯಕತ್ವ ಬದಲಾವಣೆ ಆಗದೆ ಸಂಪುಟ ಬದಲಾವಣೆ ಬೇಡ” ಎಂದು ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ರತಿವಾದ ಮಂಡಿಸುತ್ತಿದ್ದಾರೆ.

ಮೇ 4ರ ನಂತರ ರಾಜಕೀಯ ಕ್ರಾಂತಿ?

ಮೇ 4ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ. ಮೇ ಮೊದಲ ಅಥವಾ ಎರಡನೇ ವಾರದಲ್ಲಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ಗಾಳಿ ಕುಡಿಯಲು ಬಂದಿಲ್ಲ : ಡಿಸಿಎಂ ಡಿಕೆಶಿ ಗರಂ

ದೆಹಲಿಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ದೆಹಲಿಗೆ ಬರುತ್ತಿದ್ದಂತೆ ನಾನು ಇಲ್ಲಿ​ ಗಾಳಿ ಕುಡಿಯಲು ಬಂದಿಲ್ಲ ಎಂದು ಗರಂ ಆಗಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ಮಾಹಿತಿ ಬಹಿರಂಗ ಮಾಡಲ್ಲ ಎಂದಿದ್ದಾರೆ. ಅಲ್ಲದೇ ಯಾರಿಗೆ ಯಾರೂ ಆಪ್ತರೋ ನನಗೆ ಗೊತ್ತಿಲ್ಲ ಎಂದು ಸಿಎಂ ಆಪ್ತರ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿಯೇ ಉತ್ತರಿಸಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆ ಮಾಡುವುದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ. ಅದನ್ನು ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಬದಲಾವಣೆಗಳ ಬಗ್ಗೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವ ನಾನು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗುತ್ತಾ? ಈ ಬಗ್ಗೆ ಮಾತಾಡುವುದಿಲ್ಲ. ನನ್ನಿಂದ ಈ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ಮಾಡಬೇಡಿ ಎಂದ್ದಾರೆ.

ಯಾರಿಗಾದರೂ ನೀರು ಕುಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್​, ಬಿಸಿಲು ಜಾಸ್ತಿ ಇದೆ. ತಮಿಳುನಾಡು, ಪಿರಿಯಾಪಟ್ಟಣಕ್ಕೆ ಹೋದಾಗ ಅಲ್ಲಿ ಬಿಸಿಲು ಹೆಚ್ಚಾಗಿತ್ತು.ಕೇರಳದಲ್ಲಿ ಸ್ವಲ್ಪ ಪರವಾಗಿಲ್ಲ ಎಂದು ಮಾತು ಬದಲಿಸಿದ್ದಾರೆ.

ಮುಸ್ಲಿಂ ಸಮುದಾಯದ ಆಕ್ರೋಶದ ಬಗ್ಗೆ ಶಾಸಕರು ಹಾಗೂ ಸಚಿವರು ಸಿಎಂ ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದ್ದಂತೆ ಪ್ರತಿಕ್ರಿಯಿಸಿದ ಅವರು, ಪಕ್ಷದ ತಳಮಟ್ಟದಲ್ಲಿ ನಮಗೆ ಕೆಲವು ಮಾಹಿತಿ ಬಂದಿದೆ. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು” ಎಂದಿದ್ದಾರೆ.

ಸಿಎಂ ಆಪ್ತರ ಮೀಟಿಂಗ್ ​ಗೆ ಕೌಂಟರ್​

ಯಾರಿಗೆ ಯಾರು ಆಪ್ತರೋ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನಾನು ಆಪ್ತರ ಸಭೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತರ ಸಭೆ ಬಗ್ಗೆ ಕೌಂಟರ್ ನೀಡಿದ್ದು, ಹಿರಿಯ ಶಾಸಕರು ಸಂಪುಟ ಪುನಾರಚನೆಗೆ ಆಗ್ರಹಿಸಲು ಮತ್ತೆ ದೆಹಲಿ ಪ್ರವಾಸ ಮಾಡುವ ಕುರಿತು ಪ್ರತಿಕ್ರಿಯೆ ನೀಡಿ “ಕಾದು ನೋಡೋಣ” ಎಂದಿದ್ದಾರೆ.

RELATED ARTICLES
- Advertisment -
Google search engine

Most Popular