ಬೆಂಗಳೂರು: ಈ ತಿಂಗಳು ರಾಜ್ಯದಲ್ಲಿ ತಾಪಮಾನ ತೀವ್ರ ಏರಿಕೆಯಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ. ಆದರೆ ಅಸಲಿ ಪಿಕ್ಟರ್ ಇನ್ನೂ ಭಾಕಿ ಇದೆ. ಏಕೆಂದರೆ ಮುಂದಿನ ತಿಂಗಳು ಮೇನಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಏಪ್ರಿಲ್ ತಿಂಗಳಲ್ಲೇ ನೆತ್ತಿ ಸುಡುವ ಸೂರ್ಯನ ಪ್ರತಾಪಕ್ಕೆ ಕರುನಾಡು ಹೈರಾಣಾಗಿದೆ. ಇದರ ಮಧ್ಯೆ ಮೇನಲ್ಲಿ ಮತ್ತಷ್ಟು ಉರಿ ಬಿಸಿಲು ಮತ್ತು ಸೆಕೆ ಇರಲಿದೆ ಎಂದು ಹವಾಮಾನ ಇಲಾಖೆ (IMD) ವಾರ್ನಿಂಗ್ ನೀಡಿದೆ
ಮೇ ತಿಂಗಳಲ್ಲಿ ಬರೋಬ್ಬರಿ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಳವಾಗುತ್ತೆ ಎಂದು ಹೇಳಿರುವ ಹವಾಮಾನ ಇಲಾಖೆ, ಮೇ ಮೊದಲ ವಾರದಲ್ಲಿಯೇ ಬೆಂಗಳೂರು ಸೇರಿದಂತೆ ಕರ್ನಾಟಕ ಇನ್ನೂ ಸುಡಲಿದೆ ಎಂದು ಎಚ್ಚರಿಕೆ ನೀಡಿದೆ.
ಇನ್ನು ದೇಶದಲ್ಲಿ ಹಿಂದೆಂದಿಗಿಂತಲೂ ಬಿಸಿಲ ತಾಪಮಾನ ಜಾಸ್ತಿ ಇದ್ದು, ಮೇ ಅಂತ್ಯದವರೆಗೂ ಮುಂದುವರೆಯೋ ಸಾಧ್ಯತೆ ಇದೆ. ಮುಂದಿನ ತಿಂಗಳು ಸ್ವಲ್ಪ ಮಳೆಯಾದರೆ, ತಾಪಮಾನ ಕಡಿಮೆ ಆಗಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಜಗತ್ತಿನ ಅತ್ಯಂತ ಹೆಚ್ಚಿನ ತಾಪಮಾನವಿರುವ 100 ನಗರಗಳಲ್ಲಿ ದೇಶದ 95 ನಗರಗಳಿವೆ ಅಂತ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ. ದೇಶದ ಬಹುಭಾಗದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚು ಹಾಗೂ ಅದಕ್ಕಿಂತ ಜಾಸ್ತಿ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.
ಜನರ ಅಚ್ಚುಮೆಚ್ಚಿನ ತಾಣವಾಗಿರುವ ಉದ್ಯಾನನಗರಿ ಬೆಂಗಳೂರು ಈ ಬಾರಿ ಅಕ್ಷರಶಃ ಸುಡುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಏಪ್ರಿಲ್‌ನಲ್ಲಿ ಮೂರನೇ ಬಾರಿಗೆ ದಾಖಲೆಯಾಗಿರುವ ಬಿಸಿಲಾಗಿದೆ. 2014ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ಹಾಗೂ 2024ರಲ್ಲಿ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ದೇಶದಲ್ಲಿ ತಾಪಮಾನ ಪ್ರಮಾಣ
ಬಂಡಾ, ಉತ್ತರ ಪ್ರದೇಶ – 47.4 ಡಿಗ್ರಿ
ವಿದರ್ಭ, ಮಹಾರಾಷ್ಟ್ರ- 46.9 ಡಿಗ್ರಿ
ಪ್ರಯಾಗ್‌ರಾಜ್, ಉತ್ತರ ಪ್ರದೇಶ – 45.5 ಡಿಗ್ರಿ
ಫರೀದಾಕೋಟ್, ಪಂಜಾಬ್ – 45.2 ಡಿಗ್ರಿ
ವಾರಾಣಸಿ, ಉತ್ತರ ಪ್ರದೇಶ – 45 ಡಿಗ್ರಿ
ರೋಹ್ಟಕ್, ಹರಿಯಾಣ – 44.6 ಡಿಗ್ರಿ
ದೆಹಲಿ – 42.8 ಡಿಗ್ರಿ
ತೆಲಂಗಾಣ, ಆಂಧ್ರ – 42 ಡಿಗ್ರಿ
ಕೇರಳ – 40 ಡಿಗ್ರಿ
ಕರ್ನಾಟಕದಲ್ಲಿ ತಾಪಮಾನ:
ಕಲಬುರಗಿ – 45 ಡಿಗ್ರಿ
ಬೀದರ್ – 40 ಡಿಗ್ರಿ
ಮೈಸೂರು 36 ಡಿಗ್ರಿ
ವಿಜಯಪುರ – 39 ಡಿಗ್ರಿ
ರಾಯಚೂರು – 38 ಡಿಗ್ರಿ
ಕೊಪ್ಪಳ – 38 ಡಿಗ್ರಿ
ಬೆಂಗಳೂರು – 38.2 ಡಿಗ್ರಿ
ಇನ್ನು ಈ ಬಿಸಿಲ ದಗೆಯ ಮಧ್ಯೆ ಇಂದು ನಾಳೆ ಮಳೆಯ ಮುನ್ಸೂಚನೆ ನೀಡಿದೆ. ಆದರೆ ಮೇನಲ್ಲಿ ಮಾತ್ರ ಭರ್ಜರಿ ಬಿಸಿಲ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ತಿಳಿಸಿದೆ.



