ಮುಲ್ಲನ್‌ಪುರ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇವಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಏ.28 ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ರಾಜಸ್ಥಾನ್ ತಂಡ 223 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ಪಂದ್ಯದ 16ನೇ ಓವರ್‌ನಲ್ಲಿ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡುತ್ತಿರುವುದು ನೇರ ಪ್ರಸಾರದ ವೇಳೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
BCCI ನಿಯಮಗಳ ಪ್ರಕಾರ, ಸ್ಟೇಡಿಯಂನ ಆವರಣದಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಧೂಮಪಾನ ಅಥವಾ ವೇಪಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಿಯಾನ್ ಪರಾಗ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಸಾಧ್ಯತೆ ಇದೇ. ಹೀಗಾಗಿ ಅವರಿಗೆ ಭಾರಿ ಮೊತ್ತದ ದಂಡ ಅಥವಾ ಕೆಲವು ಪಂದ್ಯಗಳಿಂದ ಅಮಾನತುಗೊಳಿಸುವ ಸಾಧ್ಯತೆ ಇದೆ.
ಅದರಲ್ಲೂ ಭಾರತದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA), 2019 ಅಡಿಯಲ್ಲಿ ಇ-ಸಿಗರೇಟ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇ-ಸಿಗರೇಟ್ ಮೇಲಿನ ನಿಷೇಧವನ್ನು ಉಲ್ಲಂಘಿಸಿರುವುದರಿಂದ, ಅವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆಯೂ ಇದೆ.
ಐಪಿಎಲ್ 2026ರಲ್ಲಿ ನಾಯಕ ರಿಯಾನ್ ಪರಾಗ್ ಅವರ ಪ್ರದರ್ಶನವೂ ತೀರಾ ಕಳಪೆಯಾಗಿದೆ. ಒಟ್ಟು 9 ಪಂದ್ಯಗಳಲ್ಲಿ ಅವರು ಕೇವಲ 117 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 14.63 ಮಾತ್ರ ಇದೆ. ಪಂಜಾಬ್ ಕಿಂಗ್ಸ್ ವಿರುದ್ಧ 29 ರನ್ ಹೊಡೆದಿದ್ದೇ ಈವರೆಗಿನ ಗರಿಷ್ಠ ಮೊತ್ತವಾಗಿದೆ. ಈ ಕಳಪೆ ಪ್ರದರ್ಶನದ ನಡುವೆಯೇ ಅವರು ಇಂತಹ ವಿವಾದಕ್ಕೆ ಸಿಲುಕಿಕೊಂಡಿರುವುದು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.



