ಹೈದರಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ 2026ರ 41ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ಗಳ ಆಘಾತಕಾರಿ ಸೋಲನುಭವಿಸಿದೆ. ರಿಯಾನ್ ರಿಕೆಲ್ಟನ್ ಬಾರಿಸಿದ ದಾಖಲೆಯ ಶತಕದ ಹೊರತಾಗಿಯೂ ಬೌಲಿಂಗ್ ವೈಫಲ್ಯದಿಂದಾಗಿ ಮುಂಬೈ ಸೋಲೊಪ್ಪಿಕೊಂಡಿದೆ.
ಬೃಹತ್ ಮೊತ್ತದ ನಡುವೆಯೂ ಕೈಕೊಟ್ಟ ಬೌಲಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಶತಕದ (123 ರನ್) ನೆರವಿನಿಂದ 243 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಆದರೆ, ಈ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್ ಗಳು ವಿಫಲರಾದರು. ಹೈದರಾಬಾದ್ ಬ್ಯಾಟರ್ ಗಳ ಅಬ್ಬರದ ಮುಂದೆ ಮುಂಬೈ ಬೌಲಿಂಗ್ ಮಂಕಾಯಿತು.
“ಯೋಜನೆಗಳನ್ನು ಸರಿಯಾಗಿ ಜಾರಿಗೆ ತರಲಿಲ್ಲ” : ಪಾಂಡ್ಯ
ಪಂದ್ಯದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, “ನನ್ನ ಬೌಲರ್ಗಳ ಮೇಲೆ ನನಗೆ ನಂಬಿಕೆಯಿತ್ತು, ಅವರು ಈ ಮೊತ್ತವನ್ನು ರಕ್ಷಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ನಾವು ರೂಪಿಸಿದ್ದ ಯೋಜನೆಗಳನ್ನು ಮೈದಾನದಲ್ಲಿ ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಇಬ್ಬನಿ (Dew) ಪಂದ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ನಾನು ಭಾವಿಸುವುದಿಲ್ಲ. ಎದುರಾಳಿ ತಂಡದವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಮತ್ತು ನಾವು ಕೆಟ್ಟ ಎಸೆತಗಳನ್ನು ಹಾಕಿದೆವು,” ಎಂದು ಬೇಸರ ವ್ಯಕ್ತಪಡಿಸಿದರು.
ಕ್ಯಾಚ್ ಬಿಟ್ಟ ಮುಂಬೈ ; ಪಾಯಿಂಟ್ಸ್ ಟೇಬಲ್ನಲ್ಲಿ ಕುಸಿತ
ಬುಧವಾರ ನಡೆದ ಈ ಪಂದ್ಯದಲ್ಲಿ ಮುಂಬೈ ಆಟಗಾರರು ಹಲವು ಕ್ಯಾಚ್ ಗಳನ್ನು ಕೈಚೆಲ್ಲಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, “ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳದಿದ್ದರೆ ನೋವಾಗುವುದು ಸಹಜ. ಈ ಸೀಸನ್ ನಮಗೆ ಕಠಿಣವಾಗಿದೆ. ಸೋಲಿಗೆ ನಾನು ಬೌಲರ್ ಗಳನ್ನು ಮಾತ್ರ ದೂಷಿಸುವುದಿಲ್ಲ, ಒಟ್ಟಾರೆ ತಂಡವಾಗಿ ನಾವು ಮುಂಬೈ ಇಂಡಿಯನ್ಸ್ ಗುಣಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ,” ಎಂದರು.
ಅಭಿಮಾನಿಗಳ ಬೆಂಬಲದ ಬಗ್ಗೆ ಮಾತನಾಡಿ, “ನಾವು ಗೆಲುವಿನ ಮೂಲಕ ಅಭಿಮಾನಿಗಳಿಗೆ ಸಂಭ್ರಮಿಸಲು ಹೆಚ್ಚಿನ ಅವಕಾಶ ನೀಡಿಲ್ಲ. ಆದರೂ ಅವರು ನಮ್ಮ ಮೇಲೆ ನಿಷ್ಠೆ ತೋರುತ್ತಿದ್ದಾರೆ. ನಮ್ಮದೇ ಮೈದಾನದಲ್ಲಿ ಎದುರಾಳಿ ತಂಡದ ಪರ ಘೋಷಣೆಗಳು ಕೇಳಿಬಂದಾಗ ನಿಜಕ್ಕೂ ಬೇಸರವಾಗುತ್ತದೆ,” ಎಂದು ಹಾರ್ದಿಕ್ ಮಾರ್ಮಿಕವಾಗಿ ನುಡಿದರು.
ಮುಂದಿನ ಹಾದಿ: ಪ್ಲೇ-ಆಫ್ ರೇಸ್ನಲ್ಲಿ ಉಳಿಯಬೇಕಾದರೆ ಮುಂಬೈ ತನ್ನ ಮುಂದಿನ ಆರೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. (ಏಜೆನ್ಸಿಸ್)



