ಚಿಕ್ಕಬಳ್ಳಾಪುರ: ಕೆರೆಯಲ್ಲಿ ಆಟವಾಡು ಸಮಯದಲ್ಲಿ, ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನ ಗಮನಿಸಿದ ತಾಯಿ, ಅವರನ್ನ ರಕ್ಷಿಸಲು ಹೋಗಿದ್ದಾರೆ. ಆ ವೇಳೆ ತಾಯಿ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿ ಮೂಲದ ತಬುಸುಮ್ ಖಾನ್ (24) ಮೃತ ದುರ್ದೈವಿ. ಮುರುಗಮಲ್ಲಾದ ದರ್ಗಾಗೆ ಬಂದಿದ್ದ ಕುಟುಂಬಸ್ಥರು ಕೆರೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದರು. ತಾಯಿ ಬಟ್ಟೆಯನ್ನು ತರಲು ಹೋದಾಗ ಮಕ್ಕಳು ಕೆರೆಗೆ ಹೋಗಿದ್ದು ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದರು.
ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಾಯಿ ಕೂಡಲೇ ಕೆರೆಗೆ ದುಮುಕಿದ್ದಾರೆ. ಮೂವರು ಕೆರೆಯಲ್ಲಿ ಮುಳುಗುತ್ತಿದ್ದಾಗ ಸಂಬಂಧಿಕರು ಹಾಗೂ ತಬುಸುಮ್ ಅವರ ಪತಿ ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಈಜು ಬಾರದೇ ತಬುಸುಮ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪತಿ ಕಣ್ಣೀರಿಟ್ಟಿದ್ದಾನೆ.



