ನವದೆಹಲಿ : ಭಾರತದ ಹತ್ತಿ ವಲಯದಲ್ಲಿರುವ ಸವಾಲುಗಳನ್ನು ಎದುರಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದೆ. 5,659.22 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ‘ಹತ್ತಿ ಉತ್ಪಾದಕತೆ ಮಿಷನ್’ (2026-27 ರಿಂದ 2030-31) ಅನ್ನು ಜಾರಿಗೆ ತರಲು ಅನುಮೋದನೆ ನೀಡಲಾಗಿದೆ.
ಮಿಷನ್‌ನ ಪ್ರಮುಖ ಉದ್ದೇಶಗಳು ಹೀಗಿದೆ :
ಈ ಮಿಷನ್ ಭಾರತ ಸರ್ಕಾರದ ‘5-ಎಫ್’ (Farm to Fiber to Factory to Fashion to Foreign) ದೃಷ್ಟಿಕೋನಕ್ಕೆ ಅನುಗುಣವಾಗಿ ರೂಪಿತವಾಗಿದೆ. ಇದರ ಪ್ರಮುಖ ಗುರಿಗಳು ಹೀಗಿವೆ.
ಉತ್ಪಾದಕತೆ ಹೆಚ್ಚಳ: ರೋಗ ಮತ್ತು ಕೀಟ ನಿರೋಧಕ ಅಧಿಕ ಇಳುವರಿ ನೀಡುವ (HYV) ಬೀಜಗಳ ಅಭಿವೃದ್ಧಿ.
ಆಧುನಿಕ ತಂತ್ರಜ್ಞಾನ: ಹೈ-ಡೆನ್ಸಿಟಿ ಪ್ಲಾಂಟಿಂಗ್ ಸಿಸ್ಟಮ್ (HDPS), ಕಡಿಮೆ ಅಂತರದ ನಾಟಿ ಮತ್ತು ಸಮಗ್ರ ಹತ್ತಿ ನಿರ್ವಹಣೆಯಂತಹ ತಂತ್ರಜ್ಞಾನಗಳ ಪ್ರಚಾರ.
ರಫ್ತು ಉತ್ತೇಜನ: ಉತ್ತಮ ಗುಣಮಟ್ಟದ ಹತ್ತಿ ಉತ್ಪಾದಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಹತ್ತಿಯ ಬೇಡಿಕೆ ಹೆಚ್ಚಿಸುವುದು.
ಮೂಲಸೌಕರ್ಯ ಬಲವರ್ಧನೆ: ದೇಶಾದ್ಯಂತ ಹತ್ತಿ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ಜಿನಿಂಗ್ ಕಾರ್ಖಾನೆಗಳ ಆಧುನೀಕರಣ.
ಕಸ್ತೂರಿ ಕಾಟನ್ ಬ್ರಾಂಡಿಂಗ್: ಭಾರತೀಯ ಹತ್ತಿಯನ್ನು ವಿಶ್ವದರ್ಜೆಯ ‘ಕಸ್ತೂರಿ ಕಾಟನ್’ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಪ್ರೀಮಿಯಂ ಉತ್ಪನ್ನವಾಗಿ ಗುರುತಿಸುವುದು.
ನೈಸರ್ಗಿಕ ನಾರುಗಳಿಗೆ ಆದ್ಯತೆ
ಹತ್ತಿಯ ಜೊತೆಗೆ ಭಾರತದ ಫೈಬರ್ ನೆಲೆಯನ್ನು ವೈವಿಧ್ಯಗೊಳಿಸಲು ಈ ಮಿಷನ್ ಒತ್ತು ನೀಡಿದೆ. ಅಗಸೆ (Flax), ರೇಮಿ, ಸಿಸಲ್, ಮಿಲ್ಕ್‌ವೀಡ್, ಬಿದಿರು ಮತ್ತು ಬಾಳೆ ನಾರುಗಳಂತಹ ಪರಿಸರ ಸ್ನೇಹಿ ನೈಸರ್ಗಿಕ ನಾರುಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು.
ರೈತರಿಗೆ ಆಗುವ ಲಾಭಗಳೇನು?
ಆದಾಯ ಹೆಚ್ಚಳ: ಈ ಯೋಜನೆಯಿಂದ ಸುಮಾರು 32 ಲಕ್ಷ ರೈತರಿಗೆ ನೇರ ಲಾಭವಾಗಲಿದ್ದು, ಅವರು ಸ್ವಾವಲಂಬಿಗಳಾಗಲು ಸಹಾಯವಾಗುತ್ತದೆ.
ಡಿಜಿಟಲ್ ಸಬಲೀಕರಣ: ಮಾರುಕಟ್ಟೆಗಳ ಡಿಜಿಟಲ್ ಏಕೀಕರಣದ ಮೂಲಕ ರೈತರಿಗೆ ಪಾರದರ್ಶಕ ಬೆಲೆ ಮತ್ತು ನೇರ ಮಾರುಕಟ್ಟೆ ಪ್ರವೇಶ ದೊರೆಯಲಿದೆ.
ಉತ್ಪಾದನಾ ಗುರಿ: ಪ್ರಸ್ತುತ ಪ್ರತಿ ಹೆಕ್ಟೇರ್‌ಗೆ 440 ಕೆಜಿ ಇರುವ ಹತ್ತಿ ಇಳುವರಿಯನ್ನು 2031ರ ವೇಳೆಗೆ 755 ಕೆಜಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಒಟ್ಟು ಉತ್ಪಾದನೆಯು 498 ಲಕ್ಷ ಗಂಟುಗಳಿಗೆ (ಪ್ರತಿ ಗಂಟು 170 ಕೆಜಿ) ಏರಿಕೆಯಾಗಲಿದೆ.
ಜಾರಿ ಮತ್ತು ವ್ಯಾಪ್ತಿ:
ಈ ಯೋಜನೆಯನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹಾಗೂ ಜವಳಿ ಸಚಿವಾಲಯ ಜಂಟಿಯಾಗಿ ಅನುಷ್ಠಾನಗೊಳಿಸಲಿವೆ.
ಆರಂಭಿಕ ಹಂತದಲ್ಲಿ 14 ರಾಜ್ಯಗಳ 140 ಜಿಲ್ಲೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು. ICAR ನ 10 ಸಂಸ್ಥೆಗಳು ಮತ್ತು ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಈ ಸಂಶೋಧನೆಯಲ್ಲಿ ಭಾಗಿಯಾಗಲಿವೆ.
ಒಟ್ಟಾರೆಯಾಗಿ ಈ ಮಿಷನ್ ಹತ್ತಿ ತ್ಯಾಜ್ಯವನ್ನು ಶೇ. 2 ಕ್ಕಿಂತ ಕಡಿಮೆ ಮಾಡುವ ಮತ್ತು ಹತ್ತಿ ವಲಯದಲ್ಲಿ ಭಾರತವನ್ನು ಜಾಗತಿಕವಾಗಿ ಮುಂಚೂಣಿಗೆ ತರುವ ಗುರಿಯನ್ನು ಹೊಂದಿದೆ. (ಏಜೆನ್ಸಿಸ್)



