ಮೈಸೂರು: ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾಡಳಿತ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)ಗಳ ಸಹಯೋಗದಲ್ಲಿ ಬುಧವಾರ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗಾಗಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ನೋಂದಣಿ ಶಿಬಿರವನ್ನು ವಾರ್ತಾ ಭವನದಲ್ಲಿ ಏರ್ಪಡಿಸಲಾಗಿತ್ತು.
ಬೆಳಗ್ಗೆ ಮೇಯರ್ ಶಿವಕುಮಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಪಡೆಯಲು ಆಧಾರ್, ಪಡಿತರ ಚೀಟಿ ಮತ್ತಿತರ ದಾಖಲೆಗಳನ್ನು ಹೊಂದುವ ಜೊತೆ ಕಾಲ ಕಾಲಕ್ಕೆ ಅವುಗಳನ್ನು ಅಪ್ ಡೇಟ್ ಮಾಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘವು ಸದಸ್ಯರಿಗೆ ಅನುಕೂಲವಾಗುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.
ಈ ವೇಳೆ ಹಲವಾರು ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಂಡರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಗ್ರಾಮ ಒನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಂ.ಚೇತನ್, ವಾರ್ತಾ ಇಲಾಖೆಯ ಉಪನಿರ್ದೇಶಕ ಡಿ.ಅಶೋಕ್ ಕುಮಾರ್, ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಮೇಯರ್ ಆಪ್ತ ಸಹಾಯಕ ನಂದೀಶ್, ಪತ್ರಕರ್ತರಾದ ಆರ್.ಕೃಷ್ಣ, ಮುಳ್ಳೂರು ರಾಜು, ಎಂ.ಟಿ.ಯೋಗೇಶ್ ಕುಮಾರ್ ಇತರರಿದ್ದರು.
ಶಿಬಿರದಲ್ಲಿ ಗ್ರಾಮ ಒನ್ ನಿರ್ವಾಹಕರಾದ ಎಸ್.ಚನ್ನಬಸಪ್ಪ, ಎಂ.ಎನ್.ಶಂಕರ್, ಎಂ.ಸಿ.ಶ್ವೇತಾ, ಎಚ್.ಶೀಲಾ, ಎಂ.ಅನಿತಾ, ಎಂ.ಮಂಜುನಾಥ್ ನೆರವಾದರು.