Saturday, April 19, 2025
Google search engine

Homeರಾಜ್ಯನೈಸರ್ಗಿಕ ಸಂಪನ್ಮೂಲದ ಹಿತ ಮಿತ ಬಳಕೆಗೆ ಈಶ್ವರ ಖಂಡ್ರೆ ಕರೆ

ನೈಸರ್ಗಿಕ ಸಂಪನ್ಮೂಲದ ಹಿತ ಮಿತ ಬಳಕೆಗೆ ಈಶ್ವರ ಖಂಡ್ರೆ ಕರೆ

ಬೆಂಗಳೂರು: ಭೂತಾಯಿ ನಮಗೆ ಎಲ್ಲವನ್ನೂ ನೀಡಿದ್ದು, ನಾವು ಭೂಮಿಗೆ ಮರಳಿ ಏನಾದರೂ ನೀಡುವುದಾದರೆ, ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಖರ್ಚು ಮಾಡುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ರಿ-ಕಾಮರ್ಸ್ ಎಕ್ಸ್ ಪೋ 2023 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದು ಮನುಷ್ಯನ ಆಸೆ ಹೆಚ್ಚಾಗುತ್ತಿದ್ದು, ಐಷಾರಾಮಿ ಬದುಕಿಗಾಗಿ ಪ್ರಕೃತಿ ಪರಿಸರದ ನಾಶ ಆಗುತ್ತಿದೆ. ನಮ್ಮ ಹಿರಿಯರೂ ಕಾಡು, ಮೇಡು ಬರಿದು ಮಾಡಿದ್ದರೆ ಇಂದು ನಾವು ಬದಕಲೂ ಆಗುತ್ತಿರಲಿಲ್ಲ ಎಂದರು.

ಇಂದು ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಂತಹ ಸಮಸ್ಯೆಗಳು ಜಗತ್ತನ್ನು ಕಾಡುತ್ತಿವೆ, ಹಸಿರು ವಲಯ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಮರು ಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡುವ ಅಗತ್ಯವಿದೆ ಎಂದರು.

1987 ರಲ್ಲಿ, ವಿಶ್ವಸಂಸ್ಥೆಯ ಬ್ರಂಡ್ಲ್ಯಾಂಡ್ ಆಯೋಗ ಸುಸ್ಥಿರತೆ  ವ್ಯಾಖ್ಯಾನ ಮಾಡಿತ್ತು. ನಾವು ಅಭಿವೃದ್ಧಿಯನ್ನೂ ಸಾಧಿಸಬೇಕು, ಅದರ ಜೊತೆಗೆ ಪ್ರಕೃತಿ, ಪರಿಸರ, ಅರಣ್ಯ, ಜಲಮೂಲಗಳನ್ನೂ ಸಂರಕ್ಷಿಸಬೇಕು ಎಂದು ಕಿವಿ ಮಾತು ಹೇಳಿದರು.

ಇದು ಆಧುನಿಕ ಯುಗ ತಂತ್ರಜ್ಞಾನ ಅಸಾಧಾರಣವಾಗಿ ಬೆಳೆಯುತ್ತಿದೆ. ನಾವು ತಂತ್ರಜ್ಞಾನದ ನೆರವು ಪಡೆದು ಸಕಲ ಜೀವಸಂಕುಲ, ಸಸ್ಯ ಸಂಕುಲ ಉಳಿಸಬೇಕು ಎಂದ ಅವರು, ತಾವು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ಜುಲೈ 1ರಿಂದ 7ರವರೆಗೆ ರಾಜ್ಯಾದ್ಯಂತ ನಡೆದ ವನಮಹೋತ್ಸವದಲ್ಲಿ ಒಂದೂಕಾಲು ಕೋಟಿಗೂ ಹೆಚ್ಚು ಗಿಡ ನೆಟ್ಟ ಸಾಧನೆ ಮಾಡಲಾಗಿದೆ. ಇದರ ಜೊತೆಗೆ  “ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ”, “ಸರಕುಗಳು ಮತ್ತು ವಸ್ತುಗಳ ಮರುಬಳಕೆ” ಮತ್ತು “ವೃತ್ತಾಕಾರದ ಆರ್ಥಿಕತೆ” ಇಂದಿನ ಅಗತ್ಯವಾಗಿದೆ ಎಂಬುದು ತಮಗೆ ಮನವರಿಕೆಯಾಗಿದ್ದು, 5 ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಘೋಷಿಸಲಾಗಿದೆ ಎಂದರು.

ಈ ಎಕ್ಸ್ ಪೋದ ಉದ್ದೇಶ ಎಲೆಕ್ಟ್ರಾನಿಕ್ ನ ಮರುಬಳಕೆ ಮತ್ತು ನವೀಕರಣದೊಂದಿಗೆ ಹೆಚ್ಚು ಸಂಬಂಧ ಹೊಂದಿದೆ. ನಾವು ಮನೆಯಲ್ಲಿ ಯಾವುದೇ ಉಪಕರಣ ಕೆಟ್ಟರೆ ಹಿಂದೆ ದುರಸ್ತಿ ಮಾಡಿಸುತ್ತಿದ್ದೆವು. ಇಂದು ಅದನ್ನು ತ್ಯಾಜ್ಯಕ್ಕೆ ಎಸೆದು ಹೊಸದು ತರುತ್ತಾರೆ. ಈ ಪ್ರವೃತ್ತಿಯಲ್ಲಿ ಬದಲಾವಣೆ ಆಗಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ಈ ಪ್ರಕೃತಿಯಲ್ಲಿ ನಿರುಪಯುಕ್ತವಾದ ವಸ್ತು ಯಾವುದೂ ಇಲ್ಲ. ಎಲ್ಲ ವಸ್ತುಗಳ ಸಮರ್ಪಕ ಬಳಕೆ ಮಾಡುವುದನ್ನು ಕಲಿತರೆ, ಪ್ರಕೃತಿ, ಪರಿಸರ ಸಂಪನ್ಮೂಲ ಉಳಿಸಬಹುದು ಎಂದರು.

ನಾವು ಭೂಮಿಯೊಂದಿಗೆ ಸಹಬಾಳ್ವೆಯಿಂದ ಬದುಕಬೇಕು. ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬದುಕಬೇಕು. ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗಬೇಕು ಎಂದು ಮನವಿ ಮಾಡಿದರು.

ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ ಮತ್ತು ರಿ ಕಾಮರ್ಸ್ ಎಕ್ಸ್ ಪೋ ಆಯೋಜಕ ಊರ್ಧವ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಂಸ್ಥಾಪಕ ವೆಂಕಟೇಶ್ ರೆಡ್ಡಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular