ಬೆಳಗಾವಿ: ಅಲ್ಪಸಂಖ್ಯಾತರ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಿಗದಿತ ಅವಧಿಯಲ್ಲಿ ಇಲಾಖೆಗಳಿಗೆ ನೀಡಿರುವ ಗುರಿಗಳ ಪ್ರಗತಿ ಸಾಧಿಸಬೇಕು. ಸಾಮಾಜಿಕ ಜಾಲತಾಣ, ವಾಟ್ಸ್ ಆ್ಯಪ್, ಫೇಸ್ ಬುಕ್ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಆಗಸ್ಟ್). 09) ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿದೆ. ಮೀನುಗಾರಿಕೆ ಇಲಾಖೆಯಿಂದ ಅಲ್ಪಸಂಖ್ಯಾತರಿಗೆ ನಾನಾ ಯೋಜನೆಗಳು ಸಿಗಬೇಕಿದ್ದು, ಕೂಡಲೇ ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು. ರೇಷ್ಮೆ ಇಲಾಖೆಯಿಂದ ನೀಡುವ ವಿವಿಧ ಯೋಜನೆಗಳಿಗೆ ಶೇ.70ರಷ್ಟು ಸಹಾಯಧನವಿದೆ ಆದರೆ ಪ್ರಗತಿ ವರದಿ ಪ್ರಕಾರ ಶೇ.20ರಷ್ಟು ಫಲಾನುಭವಿಗಳು ಮಾತ್ರ ಸೌಲಭ್ಯ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಳೆದ ವರ್ಷ ಶೇ.60ರಷ್ಟು ವಿವಿಧ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಸಕ್ತ ವರ್ಷದ ಯೋಜನೆಗಳ ಅನುಷ್ಠಾನಕ್ಕೆ ಏಪ್ರಿಲ್‌ನಲ್ಲಿ ಕಾಮಗಾರಿ ಆದೇಶಗಳು ಪ್ರಾರಂಭವಾಗಿವೆ. ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು. ಉದ್ಯೋಗ ವಿನಿಮಯ ಕೇಂದ್ರ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ವಿವಿಧ ಕಂಪೆನಿಗಳು ಉದ್ಯೋಗಾವಕಾಶ ಕಲ್ಪಿಸಿವೆ. ಅದೇ ರೀತಿ ಶಿಕ್ಷಣ ಇಲಾಖೆಯಿಂದ ಶೇ.90ರಷ್ಟು ಪಠ್ಯಪುಸ್ತಕ ವಿತರಣೆ ಹಾಗೂ ಶೇ.100ರಷ್ಟು ಸಮವಸ್ತ್ರ ವಿತರಣೆ ಮೂಲಕ ಗುರಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು. ವಾಟ್ಸಾಪ್ ಸಾಮಾಜಿಕ ಮಾಧ್ಯಮ ಅಭಿಯಾನದ ಮೂಲಕ ಯೋಜನೆಗಳನ್ನು ಜಾರಿಗೊಳಿಸಬೇಕು. ಈಗಾಗಲೇ ಪೊಲೀಸ್ ಇಲಾಖೆಯಿಂದ ವಾಟ್ಸ್ ಆ್ಯಪ್ ಗ್ರೂಪ್ ಗಳ ಮೂಲಕ ಪ್ರತಿ ಗ್ರಾಮಕ್ಕೂ ಜಾಗೃತಿ ಸಂದೇಶ ರವಾನೆಯಾಗುತ್ತಿದೆ. ಅದೇ ರೀತಿ ಯೋಜನೆಗಳ ಮಾಹಿತಿಯನ್ನು ಎಲ್ಲರಿಗೂ ವಾಟ್ಸಪ್ ಮೂಲಕ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು. ಮಹಾನಗರ ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಾಧರ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅಬ್ದುಲ್ ರಶೀದ ಮಿರ್ಜನ್ನವರ. ರಾಜೀವ್ ಕುಳ್ಳರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.