ಪಿರಿಯಾಪಟ್ಟಣ: ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಬೆತ್ತಲೆ ,ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣ ಹಾಗೂ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಕುರಿತ ಅವಹೇಳನಕಾರಿ ಹೇಳಿಕೆ ಖಂಡಿಸಿ ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರ ಬಳಿಯಿಂದ ತಾಲೂಕು ಆಡಳಿತ ಭವನವರೆಗೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ತಾ.ಪಂ ಮಾಜಿ ಸದಸ್ಯ ದಲಿತ ಮುಖಂಡ ಐಲಾಪುರ ರಾಮು ಮಾತನಾಡಿ ಇಡೀ ವಿಶ್ವವೇ ತಲೆತಗ್ಗಿಸುವಂತಹ ಅತ್ಯಾಚಾರ ಕೊಲೆ ದೌರ್ಜನ್ಯ ಹಾಗೂ ಜಾತಿ ನಿಂದನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಿರುವುದು ನೀಚ ಕೆಲಸವಾಗಿದೆ.
ಅಲ್ಲಿನ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಇದುವರೆಗೂ ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಶಿಕ್ಷೆಗೆ ಒಳಪಡಿಸಿರದಿರುವುದು ಖಂಡನೀಯ, ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು, ಧರ್ಮಸ್ಥಳದಲ್ಲಿನ ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಬಂಡವಾಳಶಾಹಿಗಳ ಪರ ಕರ್ತವ್ಯ ನಿರ್ವಹಿಸಿ ಈವರೆಗೂ ಆರೋಪಿಗಳನ್ನು ಪತ್ತೆ ಮಾಡದಿರುವುದು ಖಂಡನೀಯ.
ದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಇಲ್ಲದಂತಾಗಿ ಶಾಂತಿ ವ್ಯವಸ್ಥೆ ಹದಗೆಡುತ್ತಿದೆ, ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇಡೀ ದೇಶವೇ ಮೆಚ್ಚುವ ರಾಜಕಾರಣಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು ದಲಿತರ ಮುಂಚೂಣಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿಯ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬಣ್ಣದ ಕುರಿತು ವರ್ಣಭೇದ ನೀತಿ ಅನುಸರಿಸಿ ಮಾತನಾಡಿರುವುದು ಅವರ ಹೀನ ಮನಸ್ಥಿತಿ ತೋರಿಸುತ್ತದೆ, ಈ ಎಲ್ಲಾ ಘಟನೆಗಳಲ್ಲಿ ಸಂವಿಧಾನಾತ್ಮಕವಾಗಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಕುಂ ಇ ಅಹಮದ್ ರವರು ಸರ್ಕಾರಕ್ಕೆ ಮನವಿ ತಲುಪಿಸುವುದಾಗಿ ತಿಳಿಸಿದರು.
ಈ ಸಂದರ್ಭ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ತಮಣ್ಣಯ್ಯ, ಸಿ.ಎಸ್ ಜಗದೀಶ್, ಮಲ್ಲಣ್ಣ, ಗೋಪಾಲ್, ಕರಡಿಪುರ ಕುಮಾರ್, ಶಿವಣ್ಣ, ಹೊನ್ನೂರಯ್ಯ, ರಾಜು, ಈರಾಜ್ , ಸಿ.ಕೆ ರಾಜಣ್ಣ, ಮೂಲ ನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಸಮಿತಿ ಸದಸ್ಯ ಅಶೋಕ್.ಎಸ್ , ಚನ್ನಬಸವಣ್ಣ, ಚಿಕ್ಕ ಮಹದೇವ್, ರತ್ನಮ್ಮ, ಚಲುವರಾಜ್, ಎಂ.ಕೆ ಕಾಂತರಾಜ್, ಭೀಮ್ ಆರ್ಮಿ ಗಿರೀಶ್, ಕಾಮರಾಜ್, ಮಹದೇವ್, ರಮಣಯ್ಯ, ಮೂರ್ತಿ, ದೇವೇಂದ್ರ, ಮಂಜು ಆಯಿತನಹಹಳ್ಳಿ, ಶಿವರಾಜ್, ಸೋಮಶೇಖರ್, ನಾಗರಾಜ್, ರಾಜಯ್ಯ, ಮತ್ತಿತರಿದ್ದರು.
