ಬೆಂಗಳೂರು : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ತಮಗಾದ ಒಂದು ಅಪರೂಪದ ಮತ್ತು ಹಾಸ್ಯಭರಿತ ಅನುಭವವನ್ನು ಹಂಚಿಕೊಂಡಿದ್ದು, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಆಧ್ಯಾತ್ಮದ ಶಕ್ತಿಯ ಮುಂದೆ ಸ್ಟಾರ್‌ಡಮ್ ಹೇಗೆ ಶೂನ್ಯವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಆರಂಭದಲ್ಲಿ ಕೇವಲ ಎರಡು ದಿನಗಳ ಕಾಲ ಉಳಿಯಲು ಬಂದಿದ್ದ ರಜನಿಕಾಂತ್, ಆಶ್ರಮದ ಶಾಂತ ವಾತಾವರಣಕ್ಕೆ ಆಕರ್ಷಿತರಾಗಿ 15 ದಿನಗಳ ಕಾಲ ಅಲ್ಲೇ ಉಳಿದಿದ್ದಾಗಿ ಹೇಳಿದರು. ಆಶ್ರಮದ ಪ್ರಕೃತಿ ಸೌಂದರ್ಯ, ಅಲ್ಲಿನ ಜನರ ಸರಳತೆ ಮತ್ತು ಪ್ರಾಣಿಗಳ ಸಾನ್ನಿಧ್ಯ ಅವರಿಗೆ ವಿಶೇಷ ಅನುಭವ ನೀಡಿತಂತೆ. ಅಲ್ಲಿನ ಒಂದು ಕುದುರೆಯ ಹೆಸರೂ “ರಜಿನಿ” ಆಗಿತ್ತು ಎಂದು ಹೇಳಿ ಅವರು ನಗೆ ಹುಟ್ಟಿಸಿದರು.
ಇನ್ನೂ ತಮ್ಮ ಸಿನಿ ಬದುಕಿನ ಉತ್ತುಂಗದ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡಿದ್ದ ವೇಳೆ, ಜನರು ತಮ್ಮನ್ನು ಸುತ್ತುವರಿಯಬಹುದು ಎಂದು ಭಾವಿಸಿದ್ದಾಗಿ ರಜನಿಕಾಂತ್ ಹೇಳಿದರು. ಆದರೆ ಅಲ್ಲಿ ಯಾರೂ ತಮ್ಮನ್ನು ಗುರುತಿಸದೇ, ಗಮನಿಸಲೂ ಇಲ್ಲದ ಅನುಭವ ಅವರಿಗೆ ಅಚ್ಚರಿ ತಂದಿತಂತೆ. ನಾನು ಕೈಬೀಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ಫೋಟೋ ಅಥವಾ ಆಟೋಗ್ರಾಫ್ ಕೇಳಲು ಸಹ ಯಾರೂ ಬರಲಿಲ್ಲ. ಆ ಅನುಭವ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಕರಗಿಸಿತು ಎಂದು ಹೇಳಿದ್ದಾರೆ.
ಸಿನಿಮಾದ ಪ್ರಸಿದ್ಧಿ ತಾತ್ಕಾಲಿಕ ಎಂದು ಅಭಿಪ್ರಾಯಪಟ್ಟ ರಜನಿಕಾಂತ್, ಸಿನಿಮಾದ ಸ್ಟಾರ್‌ಡಮ್ ಬರುತ್ತದೆ ಮತ್ತು ಹೋಗುತ್ತದೆ. ಆದರೆ ಆಧ್ಯಾತ್ಮಿಕ ಶಕ್ತಿ ಅತ್ಯುನ್ನತವಾದುದು. ಅದು ಸಾವಿನ ನಂತರವೂ ಶಾಶ್ವತವಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ” ಎಂದು ಆಧ್ಯಾತ್ಮದ ಮಹತ್ವವನ್ನು ಸಾರಿದರು.



