Wednesday, May 13, 2026
Google search engine

Homeಸ್ಥಳೀಯಪ್ರಧಾನಿ ಹೇಳಿಕೆ ತಪ್ಪಾಗಿ ಅರ್ಥೈಸಬೇಡಿ: ಡಾ. ಹೇಮ ನಂದೀಶ್

ಪ್ರಧಾನಿ ಹೇಳಿಕೆ ತಪ್ಪಾಗಿ ಅರ್ಥೈಸಬೇಡಿ: ಡಾ. ಹೇಮ ನಂದೀಶ್

ಮೈಸೂರು: ಜಾಗತಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ತಪ್ಪಾಗಿ ಅರ್ಥೈಸುತ್ತಿರುವುದು ದೇಶದ ಪ್ರಗತಿಗೆ ಪೂರಕವಲ್ಲ ಎಂದು ಬಿಜೆಪಿ ಮುಖಂಡರಾದ ಡಾ. ಹೇಮ ನಂದೀಶ್ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೂ ಸಂಕಷ್ಟವನ್ನು ತಂದಿಟ್ಟಿದೆ. ಹಾಗೆ ನೋಡಿದರೆ ಬಹುತೇಕ ರಾಷ್ಟ್ರಗಳಲ್ಲಿ ಭೀಕರ ಪರಿಸ್ಥಿತಿ ಇದೆ. ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇಲ್ಲ. ಈ ಸಂಘರ್ಷ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸುವ ಸಲುವಾಗಿ ಮಿತವ್ಯಯದ ಕ್ರಮಗಳ ಅಗತ್ಯತೆಯನ್ನು ಪ್ರಧಾನಿಯವರು ಪ್ರತಿಪಾದಿಸಿದ್ದಾರೆ. ಈ ವಾಸ್ತವವನ್ನು ನಾವು ಸರಿಯಾಗಿ ಗ್ರಹಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಸದೃಢ ಆರ್ಥಿಕತೆಗೆ ವಿದೇಶಿ ವಿನಿಮಯ ಹೆಚ್ಚಿನ ಪ್ರಮಾಣದಲ್ಲಿ ಮೀಸಲಿನಲ್ಲಿರಬೇಕು. ಆಮದು ಪ್ರಮಾಣ ಕಡಿಮೆಗೊಂಡರೆ ಹಾಗೂ ದೇಶದ ಸಂಪತ್ತು ದೇಶದಲ್ಲಿಯೇ ವ್ಯಯಗೊಂಡರೆ ಇದು ಸಾಧ್ಯ. ಇಲ್ಲದಿದ್ದರೆ ರೂಪಾಯಿ ಮೌಲ್ಯ ಕುಸಿತಗೊಂಡು ಆರ್ಥಿಕತೆಗೆ ಧಕ್ಕೆ ಉಂಟಾಗುತ್ತದೆ. ಮೋದಿಯವರು ವೆಚ್ಚ ಕಡಿಮೆ ಮಾಡಿ ಉಳಿತಾಯಕ್ಕೆ ಮಹತ್ವ ಕೊಡಿ ಎಂದು ಹೇಳಿದ್ದಾರೆಯೆ ಹೊರತು ತ್ಯಾಗ ಮಾಡಿ ಎಂದು ಹೇಳಿಲ್ಲ. ಅವರ ಈ ಸಲಹೆ ಯುದ್ಧ ಕೊನೆಗೊಂಡು ಸಹಜ ಸ್ಥಿತಿ ಮರಳುವ ತನಕ ಮಾತ್ರ ಎಂಬುದನ್ನು ಗಮನಿಸಬೇಕಿದೆ ಎಂದು ಡಾ ಹೇಮಾ ನಂದೀಶ್ ವಿವರಿಸಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಪ್ರಧಾನಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಐಷಾರಾಮಿ ಬದುಕಿಗೆ ಪ್ರಚೋದಿಸುವ ವಿರೋಧ ಪಕ್ಷಗಳ ಹೇಳಿಕೆ ದೇಶದ ಆರ್ಥಿಕ ಭದ್ರತೆಗೆ ಬಹುದೊಡ್ಡ ಅಪಾಯ. ರಾಜಕೀಯ ವಿಷಯಗಳನ್ನು ಆಚೆಗಿಟ್ಟು ದೇಶದ ಹಿತ ದೃಷ್ಟಿಯಿಂದ ವಿಚಾರಿಸುವ ಸಮಯವಿದು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular