Thursday, May 14, 2026
Google search engine

Homeರಾಜಕೀಯಹಿಜಾಬ್‌ಗೆ ಮತ್ತೆ ಅನುಮತಿ : ರಾಜ್ಯ ಸರ್ಕಾರದ ಹೊಸ ಆದೇಶಕ್ಕೆ ಬಿಜೆಪಿ ವಿರೋಧ

ಹಿಜಾಬ್‌ಗೆ ಮತ್ತೆ ಅನುಮತಿ : ರಾಜ್ಯ ಸರ್ಕಾರದ ಹೊಸ ಆದೇಶಕ್ಕೆ ಬಿಜೆಪಿ ವಿರೋಧ

ಬೆಂಗಳೂರು : 2022ರಲ್ಲಿ ಉಡುಪಿಯಲ್ಲಿ ಆರಂಭವಾಗಿ ರಾಜ್ಯ ಹಾಗೂ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಮತ್ತೆ ಸದ್ದು ಮಾಡಿದ್ದು, ರಾಜ್ಯ ಸರ್ಕಾರ ಇದೀಗ 2022ರ ಸಮವಸ್ತ್ರ ಸಂಬಂಧಿತ ಆದೇಶವನ್ನು ಹಿಂಪಡೆದು ಹೊಸ ಸರ್ಕಾರಿ ಆದೇಶ ಹೊರಡಿಸಿದೆ. ಅಲ್ಲದೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದೆ. ಆದರೆ ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ಮುಂದುವರಿದಿದ್ದು, ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇನ್ನೂ ಕರ್ನಾಟಕ ಶಿಕ್ಷಣ ಕಾಯ್ದೆ, 1983 ರ ಅಡಿಯಲ್ಲಿ ಹೊರಡಿಸಲಾದ ಹೊಸ ಸರ್ಕಾರಿ ಆದೇಶದಲ್ಲಿ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆವಸ್ತ್ರ ಅಥವಾ ಹಿಜಾಬ್ ಸೇರಿದಂತೆ ಸಾಂಪ್ರದಾಯಿಕ ಮತ್ತು ಧಾರ್ಮಿಕ ಸಂಕೇತಗಳನ್ನು ಧರಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಇವು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್‌.ಅಸೋಕ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧಿಸಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಮಣಿದು ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಜಾಬ್ ನಿಷೇಧಿಸಲಾಗಿತ್ತು, ಪಶ್ಚಿಮ ಬಂಗಾಳದಲ್ಲಿ ಅತಿ ಓಲೈಕೆ ಮಾಡಿ ಮಮತಾ ಬ್ಯಾನರ್ಜಿ ಸೋತು ಮನೆಗೆ ಸೇರಿದ್ದಾರೆ, ತಮಿಳುನಾಡಲ್ಲಿ ಹಿಂದುಗಳನ್ನು ಬೈದು ಸ್ಟಾಲಿನ್ ಸೋತರು. ಇದೇ ರೀತಿ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲುತ್ತದೆ. ರಾಜ್ಯ ಸರ್ಕಾರ ಹಿಂದುಗಳಿಗೆ ಯಾವಾಗಲೂ ವಂಚನೆ ಹಾಗೂ ದ್ರೋಹ ಮಾಡುತ್ತಿದೆ ಎಂದು ಆರ್​.ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲೂ ಪೋಸ್ಟ್‌ ಮಾಡಿ ಕಿಡಿಕಾರಿದ ಅಶೋಕ್‌, ದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಬೆದರಿದೆ, ಈಗ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ‘ಹಿಜಾಬ್’ ಅಸ್ತ್ರವನ್ನು ಕೈಗೆತ್ತಿಕೊಂಡಿದೆ.

ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯ, ಇವೆಲ್ಲದರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಮುನಿಸಿಕೊಂಡಿರುವ ಮುಸ್ಲಿಂ ಮತ ಬ್ಯಾಂಕ್​ಗೆ ‘ಹಿಜಾಬ್’ ಮೂಲಕ ಮುಲಾಮು ಹಚ್ಚಲು ಹೊರಟಿದೆ ಎಂದು ಬರೆದುಕೊಂಡಿದ್ದಾರೆ.

2022ರಲ್ಲಿ ಬಿಜೆಪಿ ಸರಕಾರ, ಶಾಲಾ ಕಾಲೇಜಿನಲ್ಲಿ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಿತ್ತು. ಇದೀಗ ಈ ಆದೇಶವನ್ನು ಕಾಂಗ್ರೆಸ್‌ ಸರಕಾರ ವಾಪಸ್‌ ಪಡೆದಿದೆ.

RELATED ARTICLES
- Advertisment -
Google search engine

Most Popular