ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಮಿತವ್ಯಯ ಪಾಲನೆ ಕರೆಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೇ.30ರಿಂದ 40ರಷ್ಟು ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ನಿರ್ಧಾರ ಮಾಡಿದ್ದೇವೆ. ದಿನ ಬಿಟ್ಟು ದಿನ ಬೆಂಗಾವಲು ವಾಹನಗಳನ್ನು ಬಳಸಲಿದ್ದೇವೆ. ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ತೆರಳುವ ಸಂದರ್ಭದಲ್ಲೂ ಎಲ್ಲ ವಾಹನಗಳನ್ನು ಬಳಸುವುದಿಲ್ಲ ಎಂದು ಹೇಳಿದರು.
ಈ ನಿರ್ಧಾರಕ್ಕೆ ಮನೆಯ ಸದಸ್ಯರೂ ಸಹಕಾರ ನೀಡಿದ್ದು, ಸಾರ್ವಜನಿಕರೂ ಪ್ರಧಾನಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು. ಮನೆಯಲ್ಲಿ ಬಳಸುವ ಅಡುಗೆ ಎಣ್ಣೆಯ ಪ್ರಮಾಣವನ್ನೂ ಕಡಿಮೆ ಮಾಡಲು ಕುಟುಂಬದವರಿಗೆ ಸೂಚಿಸಿದ್ದೇನೆ ಎಂದರು. ಇನ್ನೂ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಈಗಾಗಲೇ ಪ್ರಧಾನಿ ಕರೆಗೆ ಸ್ಪಂದಿಸಿ ಮೆಟ್ರೋ ಸೇರಿದಂತೆ ಸಾಮೂಹಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಲು ಆರಂಭಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ಕೋಟಾವನ್ನು ಏಕಾಏಕಿ ಕಡಿಮೆ ಮಾಡುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಹಿಂದಿನ ಬಿಜೆಪಿ ಸರ್ಕಾರವು ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ಹಾಗೂ ಸದಾಶಿವ ಆಯೋಗದ ವರದಿಗಳ ಆಧಾರದ ಮೇಲೆ ಎಸ್‌ಸಿ ಮೀಸಲಾತಿಯನ್ನು 15ರಿಂದ 17 ಶೇಕಡಾಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು 3ರಿಂದ 7 ಶೇಕಡಾಕ್ಕೆ ಹೆಚ್ಚಿಸಿತ್ತು ಎಂದು ಹೇಳಿದರು.



