Thursday, May 14, 2026
Google search engine

Homeರಾಜಕೀಯಹಿಜಾಬ್‌ಗೆ ಅವಕಾಶವಿದ್ದರೆ ಕೇಸರಿ ಶಾಲಿಗೂ ಅನುಮತಿ ನೀಡಿ : ಯತ್ನಾಳ್ ಆಗ್ರಹ

ಹಿಜಾಬ್‌ಗೆ ಅವಕಾಶವಿದ್ದರೆ ಕೇಸರಿ ಶಾಲಿಗೂ ಅನುಮತಿ ನೀಡಿ : ಯತ್ನಾಳ್ ಆಗ್ರಹ

ವಿಜಯಪುರ : ರಾಜ್ಯದ ಶಾಲೆಗಳಲ್ಲಿ ಧಾರ್ಮಿಕ ಸಮಾನತೆ ಹಾಗೂ ಸಮವಸ್ತ್ರ ಸಂಹಿತೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಾದರೆ, ಹಿಂದೂ ವಿದ್ಯಾರ್ಥಿಗಳಿಗೂ ಕೇಸರಿ ಶಾಲು ಧರಿಸಲು ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಯತ್ನಾಳ್, “ಶಿಕ್ಷಣ ಕ್ಷೇತ್ರದಲ್ಲಿ ತಾರತಮ್ಯ ಇರಬಾರದು. ಒಂದು ಸಮುದಾಯಕ್ಕೆ ಧಾರ್ಮಿಕ ಸಂಕೇತ ಧರಿಸಲು ಅವಕಾಶ ನೀಡಿದರೆ, ಹಿಂದೂಗಳಿಗೂ ಅವರ ಸಂಸ್ಕೃತಿಯ ಭಾಗವಾದ ಕೇಸರಿ ಶಾಲು ಧರಿಸಲು ಅವಕಾಶ ಸಿಗಬೇಕು. ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಅಥವಾ ಪ್ರತಿಯೊಬ್ಬರಿಗೂ ಅವರ ನಂಬಿಕೆಯಂತೆ ನಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹಿಂದೂ ಮತಗಳ ಕ್ರೋಡೀಕರಣ ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಶಾಲೆಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕಾತಿ, ಶೂ-ಸಾಕ್ಸ್ ಹಾಗೂ ಪಠ್ಯಪುಸ್ತಕ ವಿತರಣೆ ಮೊದಲಾದ ಮೂಲಭೂತ ಸಮಸ್ಯೆಗಳ ಕಡೆ ಗಮನ ಹರಿಸಬೇಕಾದ ಸರ್ಕಾರ ಹಿಜಾಬ್ ವಿಚಾರಕ್ಕೆ ಆದ್ಯತೆ ನೀಡಿರುವುದು ಕಾಂಗ್ರೆಸ್ ಸರ್ಕಾರದ ರಾಜಕೀಯ ಆತಂಕವನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಯುವ ಮತದಾರರು ತಕ್ಕ ಪಾಠ ಕಲಿಸುವುದು ಖಚಿತ ಎಂದು ಯತ್ನಾಳ್ ಹೇಳಿದರು. ಈ ಹಿಂದೆ ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಯತ್ನಾಳ್ ಅವರ ಹೇಳಿಕೆ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಮವಸ್ತ್ರ ಸಂಹಿತೆ ಮತ್ತು ಧಾರ್ಮಿಕ ಸಂಕೇತಗಳ ಬಳಕೆ ಕುರಿತು ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.

RELATED ARTICLES
- Advertisment -
Google search engine

Most Popular