ಮೈಸೂರು: 129.00 ಕೋಟಿ ರೂ ವೆಚ್ಚದ ಮೈಸೂರು ನಗರದ ಬನ್ನಿಮಂಟಪದಲ್ಲಿನ ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣದ ನೆಲಮಾಳಿಗೆ (10,538 ಚ.ಮೀ): ಇಲ್ಲಿ ಕೇವಲ ವಾಹನ ನಿಲುಗಡೆಗೆ ಆದ್ಯತೆ ನೀಡಲಾಗಿದ್ದು, ಏಕಕಾಲಕ್ಕೆ 4,000 ದ್ವಿಚಕ್ರ ವಾಹನಗಳು ಮತ್ತು 200 ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ನೆಲಮಹಡಿ (18,370 ಚ.ಮೀ): ಇದು ಬಸ್ ಟರ್ಮಿನಲ್ ಪ್ರಮುಖ ಭಾಗವಾಗಿದ್ದು, ಪ್ರಯಾಣಿಕರ ಆಗಮನ ಮತ್ತು ನಿರ್ಗಮನ ದ್ವಾರಗಳು, ಟಿಕೆಟ್ ಬುಕ್ಕಿಂಗ್ ಕೌಂಟರ್ ಹಾಗೂ ಸುಂದರವಾದ ಗಾರ್ಡನ್ ಮತ್ತು ಲ್ಯಾಂಡ್ಸ್ಕೇಪಿAಗ್ ವ್ಯವಸ್ಥೆ ಇರಲಿದೆ.
ಮೊದಲನೇ ಮಹಡಿ (8,478 ಚ.ಮೀ): ಈ ಭಾಗವು ಸಂಪೂರ್ಣವಾಗಿ ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು, ಡಾರ್ಮಿಟರಿ ಮತ್ತು ಕಛೇರಿಗಳಿಗಾಗಿ ಮೀಸಲಿರಿಸಲಾಗಿದೆ.
ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗಾಗಿ ಆಧುನಿಕ ಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ.
ಬಸ್ ಅಂಕಣಗಳು: ಒಟ್ಟು 75 ಬಸ್ ಅಂಕಣಗಳು ಲಭ್ಯವಿದ್ದು, 35 ಬಸ್ಗಳ ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಗೃಹ ಮತ್ತು ಸಾಮಾನ್ಯ ಪ್ರಯಾಣಿಕರಿಗಾಗಿ ವಿಶಾಲವಾದ ಆಸನ ವ್ಯವಸ್ಥೆ ಇರಲಿದೆ.
ಶೌಚಾಲಯ ಸಂಕೀರ್ಣ: ಮಹಿಳೆಯರು ಮತ್ತು ಪುರುಷರಿಗಾಗಿ ತಲಾ 6 ಬ್ಲಾಕ್ಗಳನ್ನು ಶೌಚಾಲಯಗಳಲ್ಲದೆ, ವಿಕಲಚೇತನರು ಮತ್ತು ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಸುಲಭ ಓಡಾಟಕ್ಕಾಗಿ 4 ಲಿಫ್ಟ್ ಗಳು ಮತ್ತು 2 ಎಲಿವೇಟರ್ಗಳು, ಜ್ಞಾನದಾಹಿಗಳಿಗಾಗಿ ಗ್ರಂಥಾಲಯ, ಉಪಹಾರ ಗೃಹ ಮತ್ತು ನಿರಂತರ ಮಾಹಿತಿ ನೀಡಲು ವಿಚಾರಣಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಸುರಕ್ಷತೆ ಮತ್ತು ನಿರ್ವಹಣೆ: ನಿಲ್ದಾಣದ ಒಳಭಾಗದಲ್ಲಿ ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಮೇಲ್ಭಾಗದಲ್ಲಿ ಮುಚ್ಚಳ ಹೊದಿಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಿಲ್ದಾಣದ ಸಂಪೂರ್ಣ ನಿರ್ವಹಣೆಗಾಗಿ ನಿಲ್ದಾಣಾಧಿಕಾರಿಗಳ ಕೊಠಡಿ ಮತ್ತು ಪ್ರತ್ಯೇಕ ಕಛೇರಿ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲ್ದಾಣದಲ್ಲಿ ಉನ್ನತ ದರ್ಜೆಯ ಹವಾನಿಯಂತ್ರಿತ ವೇಯ್ಟಿಂಗ್ ಹಾಲ್ಗಳನ್ನು ನಿರ್ಮಿಸಲಾಗುತ್ತಿದೆ. ಇದು ವಿಮಾನ ನಿಲ್ದಾಣಗಳ ಲಾಂಜ್ ಮಾದರಿಯಲ್ಲಿ ಇರಲಿದ್ದು, ಸುದೀರ್ಘ ಪ್ರಯಾಣ ಮಾಡುವವರಿಗೆ ಆರಾಮದಾಯಕ ಅನುಭವ ನೀಡಲಿದೆ. ಇದರೊಂದಿಗೆ ಸಾಮಾನ್ಯ ಕಾಯುವಿಕೆಗಾಗಿ ವಿಶಾಲವಾದ ಹಾಲ್ ಹಾಗೂ ಉಚಿತ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳ ವ್ಯವಸ್ಥೆ ಇರಲಿದೆ.
ಸುರಕ್ಷತೆ ಮತ್ತು ತುರ್ತು ಸೇವೆಗೆ ಆದ್ಯತೆ:
ಸಾರ್ವಜನಿಕರ ಸುರಕ್ಷತೆಗಾಗಿ ಇಡೀ ನಿಲ್ದಾಣದಾದ್ಯಂತ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ಪ್ರಚಾರ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಚೌಕಿ ಮತ್ತು ಭದ್ರತಾ ಕಛೇರಿಯನ್ನು ತೆರೆಯಲಾಗುವುದು. ವಿಶೇಷವಾಗಿ, ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ‘ತುರ್ತು ಆರೋಗ್ಯ ತಪಾಸಣಾ ಕೇಂದ್ರ’ ಹಾಗೂ ಅಗ್ನಿ ಅವಘಡಗಳ ನಿರ್ವಹಣೆಗೆ ಪ್ರತ್ಯೇಕ ನಿಯಂತ್ರಣ ಕೊಠಡಿ ಇರಲಿದೆ.
ಮಾತೃ-ಮಕ್ಕಳ ಮತ್ತು ವಿಕಲಚೇತನ ಸ್ನೇಹಿ ನಿಲ್ದಾಣ:
ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿರುವ ಈ ಯೋಜನೆಯಲ್ಲಿ, ತಾಯಂದಿರಿಗಾಗಿ ‘ತಾಯಿ-ಮಗು ಆರೈಕೆ ಕೇಂದ್ರ’ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ವಿಕಲಚೇತನರಿಗಾಗಿ ಪ್ರತ್ಯೇಕ ರ್ಯಾಂಪ್ ಮತ್ತು ದೃಷ್ಟಿಹೀನರಿಗಾಗಿ ವಿಶೇಷ ‘ದಾರಿ ಮಾರ್ಗಸೂಚಿ’ ವ್ಯವಸ್ಥೆ ಮಾಡಲಾಗುತ್ತಿರುವುದು ಈ ಯೋಜನೆಯ ವಿಶೇಷತೆ.
ವಾಣಿಜ್ಯ ಮತ್ತು ಡಿಜಿಟಲ್ ಸೌಲಭ್ಯಗಳು:
ಪ್ರಯಾಣಿಕರು ತಮ್ಮ ಲಗೇಜ್ಗಳನ್ನು ಸುರಕ್ಷಿತವಾಗಿಡಲು ಡಿಜಿ-ಲಾಕರ್ಗಳು ಮತ್ತು ಲಗೇಜ್ ಕೊಠಡಿಗಳ ವ್ಯವಸ್ಥೆ ಇರಲಿದೆ. ವಾಣಿಜ್ಯ ಬಳಕೆಗೆ ಪಾರಂಪರಿಕ ಶೈಲಿಯ ಮಳಿಗೆಗಳು, ಎಟಿಎಂ, ಪಾರ್ಸೆಲ್/ಕೊರಿಯರ್ ಕೇಂದ್ರ ಮತ್ತು ಅಂಚೆ ಕಛೇರಿ (ಖಒS) ಸೇವೆಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ಪರಿಸರ ಸ್ನೇಹಿ ಕ್ರಮವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್ಗಳನ್ನು ಸಹ ಸ್ಥಾಪಿಸಲಾಗುತ್ತಿದೆ.
ಪ್ರತ್ಯೇಕ ಅಂಕಣಗಳು: ಅಂತರ-ರಾಜ್ಯ ಬಸ್ಗಳು ಮತ್ತು ನಗರ ಸಾರಿಗೆ ಬಸ್ಗಳಿಗಾಗಿ ಪ್ರತ್ಯೇಕ ಅಂಕಣಗಳ ವ್ಯವಸ್ಥೆ. ಪ್ರಯಾಣಿಕರು ಗೊಂದಲಕ್ಕೀಡಾಗದoತೆ ಪ್ರತಿ ಅಂಕಣಕ್ಕೂ ಸ್ಪಷ್ಟ ಮಾರ್ಗಸೂಚಿಗಳು, ನಿಲ್ದಾಣದ ಆವರಣದಲ್ಲೇ ಆಟೋ ಮತ್ತು ಟ್ಯಾಕ್ಸಿಗಳಿಗೆ ಸುಸಜ್ಜಿತ ನಿಲುಗಡೆ ನಿಲ್ದಾಣ. ಪ್ರವಾಸಿ ಮಾಹಿತಿ ಕೇಂದ್ರ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ವಿಶೇಷ ಮಾಹಿತಿ ಕೇಂದ್ರ ಮತ್ತು ಮುಂಗಡ ಕಾಯ್ದಿರಿಸುವಿಕೆ ಕೌಂಟರ್ಗಳು.
ಈ ಯೋಜನೆಯು ಕೇವಲ ಸಾರಿಗೆಗೆ ಸೀಮಿತವಾಗದೆ, ಸಾರ್ವಜನಿಕರಿಗೆ ಒಂದು ಸುಸಜ್ಜಿತ ವಾಣಿಜ್ಯ ಮತ್ತು ಸೇವಾ ಕೇಂದ್ರವಾಗಿ ಮಾರ್ಪಡಲಿದೆ ಎಂದು ಯೋಜನೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.



