ಮೈಸೂರು: ಮುಖ್ಯ ರಸ್ತೆಯಲ್ಲಿ ಕರ್ಕಶ ಶಬ್ದದೊಂದಿಗೆ ವೀಲಿಂಗ್ ಮಾಡುವುದನ್ನು ನಿಲ್ಲಿಸಿ, ಬೀದಿನಾಯಿಗಳ ಹಾವಳಿಗೆ ನಿಯಂತ್ರಣ ಹೇರಿ, ಪಾರ್ಕ್‌ಗಳಲ್ಲಿ ಪೋಲಿ ಹುಡುಗರ ಕಾಟ ತಪ್ಪಿಸಿ, ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಿ…
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ೬೩ನೇ ವಾರ್ಡಿನಲ್ಲಿ ಬುಧವಾರ ನಡೆಸಿದ ಪಾದಯಾತ್ರೆಯ ವೇಳೆ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಪರಿಹರಿಸುವಂತೆ ಮನವಿ ಮಾಡಿದರು. ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದ ಅವರು ೨೪ನೇ ಮುಖ್ಯರಸ್ತೆಯಲ್ಲಿ ಮನೆ ಮನೆಗೆ ತೆರಳಿ ತಮ್ಮ ದೂರವಾಣಿ ಕರೆ, ಸಮಸ್ಯೆ ಪರಿಹಾರಕ್ಕೆ ಸಂಪರ್ಕಿಸಬೇಕಾದ ವಿವರದ ಮಾಹಿತಿಯ ಕಾರ್ಡ್‌ನ್ನು ನೀಡಿದರು. ಈ ವೇಳೆ ಹಿರಿಯ ನಾಗರಿಕರೊಬ್ಬರು ಸಂಜೆ ಪಂಡಿತ್ ಪುಟ್ಟರಾಜ ಗವಾಯಿ ಕ್ರೀಡಾಂಗಣ ರಸ್ತೆ, ಮುಖ್ಯರಸ್ತೆಯಲ್ಲಿ ಯುವಕರು ವೀಲಿಂಗ್ ಮಾಡುವುದರಿಂದ ವಾಯುವಿಹಾರಕ್ಕೆ ತುಂಬಾ ತೊಂದರೆಯಾಗಿದೆ. ಭಾರೀ ಸದ್ದಿನೊಂದಿಗೆ ಬೈಕ್ ಚಾಲನೆ ಮಾಡುವ ಜತೆಗೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುವ ಕಾರಣ ಹಿರಿಯರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ ಎಂದರು.
ಇದಕ್ಕೆ ಸ್ಪಂದಿಸಿದ ಶಾಸಕರು ಯಾವ್ಯಾವ ಕಡೆಗಳಲ್ಲಿ ವೀಲಿಂಗ್ ಮಾಡಲಾಗುತ್ತಿದೆ ಎನ್ನುವ ವಿವರ ಪಡೆದುಕೊಂಡರಲ್ಲದೆ, ಕೂಡಲೇ ಪೊಲೀಸರು ವಿಶೇಷ ಸಂಚಾರ ಮಾಡಿ ಕಡಿವಾಣ ಹಾಕಬೇಕು. ವೀಲಿಂಗ್ ಮಾಡುವವರ ವಾಹನಗಳನ್ನು ಹಿಡಿದು ದಂಡ ಹಾಕುವಂತೆ ಸೂಚಿಸಿದರು.
೨೩ನೇ ಕ್ರಾಸ್‌ನ ನಿವಾಸಿ ಮಧುಸೂಧನ ಎಂಬುವರು ಮೊದಲು ವಾರಕ್ಕೆ ಎರಡು ದಿನ ಫಾಗಿಂಗ್ ಮಾಡಲಾಗುತ್ತಿತ್ತು. ಈಗ ವಾರಕ್ಕೆ ಒಂದು ದಿನವಷ್ಟೇ ಮಾಡುತ್ತಿರುವುದರಿಂದ ಸೊಳ್ಳೆಗಳ ಕಾಟವಿದೆ. ಕೂಡಲೇ ಔಷಧಿ ಸಿಂಪಡಣೆ ಮಾಡಬೇಕು ಎಂದು ಹೇಳಿದರೆ, ಮತ್ತೊಬ್ಬರು ರಸ್ತೆಯಲ್ಲಿ ಹಾಕಿರುವ ಡಾಂಬರು ಒಂದೇ ವಾರಕ್ಕೆ ಕಿತ್ತು ಬರುತ್ತಿದೆ. ಬೈಕ್ ನಿಲ್ಲಿಸಿದ ಮರು ದಿನವೇ ಕಲ್ಲುಗಳು ಹೊರಬಂದಿದೆ. ಕಾಮಗಾರಿ ಗುಣಮಟ್ಟ ಪರಿಶೀಲಿಸುವಂತೆ ಶಾಸಕರಲ್ಲಿ ಮನವಿ ಮಾಡಿದಾಗ, ಕೂಡಲೇ ಸಂಬಂಧಿಸಿದವರೊಂದಿಗೆ ಮಾತನಾಡಿ ಮತ್ತೊಮ್ಮೆ ಗುಣಮಟ್ಟದಿಂದ ಕೂಡಿರುವ ಕಾಮಗಾರಿ ಮಾಡಿಸಲಾಗುವುದೆಂದು ಭರವಸೆ ನೀಡಿದರು.
೨೨ನೇ ಕ್ರಾಸ್‌ನಲ್ಲೂ ಕೆಲವರು ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರಿಂದಾಗಿ ಮೂರು ದಿನಕ್ಕೊಮ್ಮೆ ಫಾಗಿಂಗ್ ಮಾಡುವಂತೆ ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ರೀತಿ ವಿದ್ಯುತ್ ಕಂಬಕ್ಕೆ ಬಾಚಿಕೊಂಡಿರುವ ಕೊಂಬೆಗಳನ್ನು ಕಡಿಯಬೇಕೆಂದು ಹೇಳಿದಾಗ, ಪಾಲಿಕೆ ಅಧಿಕಾರಿಗಳಿಗೆ ಅಭಯ ತಂಡದಿಂದ ಕೂಡಲೇ ಟ್ರಿಮ್ ಮಾಡಿಸಬೇಕು ಎಂದರು.
ನಗರಪಾಲಿಕೆ ಸದಸ್ಯೆ ಶಾರದಮ್ಮ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ನಾಗೇಂದ್ರಪ್ರಸಾದ್, ಮುಖಂಡರಾದ ಶಿವಪ್ಪಾಜಿ, ಈಶ್ವರ್, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಇನ್ನಿತರರು ಹಾಜರಿದ್ದರು.
ಬೀದಿ ನಾಯಿಗಳ ಹಾವಳಿ ತಪ್ಪಿಸಿ: ಗೋಪಾಲರಾವ್ ಎಂಬುವವರು ಬೀದಿ ನಾಯಿಗಳ ಹಾವಳಿ ಇದೆ. ಒಂಟಿಯಾಗಿ ತಿರುಗಾಡುವುದು ತುಂಬಾ ಕಷ್ಟಕರವಾಗಿದೆ. ತಕ್ಷಣವೇ ನಾಯಿಗಳನ್ನು ಹಿಡಿಯಬೇಕು ಎಂದು ಹೇಳಿದಾಗ, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನಾಯಿಗಳನ್ನು ಕೊಲ್ಲುವಂತಿಲ್ಲ. ಬೀದಿ ನಾಯಿಗಳ ಪುನರ್ ವಸತಿ ಕೇಂದ್ರ ನಿರ್ಮಾಣವಾದ ಮೇಲೆ ಎಲ್ಲವನ್ನು ಸೆರೆ ಹಿಡಿದು ಅಲ್ಲಿಗೆ ಬಿಡಲಾಗುವುದು ಎಂದು ಶ್ರೀವತ್ಸ ತಿಳಿಸಿದರು
ಪಾರ್ಕ್‌ಗಳಲ್ಲಿ ಪುಂಡರ ಕಾಟ: ರತ್ನಮ್ಮ ಎಂಬುವರು ಪಾರ್ಕ್‌ಗಳಲ್ಲಿ ಪುಂಡಪೋಕರಿಗಳ ಕಾಟ ತಪ್ಪಿಸಬೇಕು. ಪಾರ್ಕ್‌ಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ರಿಂಗ್ ರಸ್ತೆಯಲ್ಲಿ ಪೊಲೀಸರು ಸಂಜೆ ನಂತರ ಗಸ್ತು ತಿರುಗುವಂತೆ ಮಾಡಬೇಕು ಎಂದು ಕೋರಿದರು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಶಾಸಕರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಜೆ.ಪಿ.ನಗರದಲ್ಲಿರುವ ಪ್ರತಿಯೊಂದು ಉದ್ಯಾನವನಗಳಲ್ಲಿ ಅನಗತ್ಯವಾಗಿ ಕುಳಿತು ಕೊಂಡು ಕಾಲ ಕಳೆಯುವ ಹುಡುಗರಿಗೆ ಅವಕಾಶ ಕೊಡಬಾರದು. ರಿಂಗ್ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಗಸ್ತು ಮಾಡಲು ಕ್ರಮಕೈಗೊಳ್ಳಿ ಎಂದು ಶ್ರೀವತ್ಸ ಸೂಚಿಸಿದರು.