ನವದೆಹಲಿ : ಸರ್ಕಾರವು ವಿದೇಶ ಪ್ರಯಾಣದ ಮೇಲೆ ಸೆಸ್ ಅಥವಾ ತೆರಿಗೆ ವಿಧಿಸುವ ಬಗ್ಗೆ ಪರಿಗಣಿಸುತ್ತಿದೆ ಎಂಬ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ನಿರಾಕರಿಸಿದ್ದು, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ಹೆಚ್ಚುತ್ತಿರುವ ಹಣಕಾಸಿನ ಒತ್ತಡವನ್ನು ಸರಿದೂಗಿಸಲು ವಿದೇಶ ಪ್ರಯಾಣದ ಮೇಲೆ ತಾತ್ಕಾಲಿಕ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚರ್ಚಿಸುತ್ತಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಸೂಚಿಸಿದ ನಂತರ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇದು ಸಂಪೂರ್ಣ ಸುಳ್ಳು ಸುದ್ದಿ. ವಿದೇಶ ಪ್ರಯಾಣದ ಮೇಲೆ ಯಾವುದೇ ರೀತಿಯ ನಿರ್ಬಂಧ ಅಥವಾ ತೆರಿಗೆ ವಿಧಿಸುವ ಪ್ರಶ್ನೆಯೇ ಇಲ್ಲ. ಜನರಿಗೆ ‘ಸುಲಭ ವ್ಯವಹಾರ’ ಮತ್ತು ‘ಸುಲಭ ಜೀವನ’ ಸೌಲಭ್ಯಗಳನ್ನು ಹೆಚ್ಚಿಸುವತ್ತ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಧಾನಿಯ ಸ್ಪಷ್ಟೀಕರಣದ ಬಳಿಕ, ವರದಿ ಪ್ರಕಟಿಸಿದ್ದ CNBC-TV18 ತನ್ನ ವರದಿಯನ್ನು ಹಿಂತೆಗೆದುಕೊಂಡಿದ್ದು, ಸರ್ಕಾರ ವಿದೇಶ ಪ್ರಯಾಣದ ಮೇಲೆ ತೆರಿಗೆ ಅಥವಾ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ನಿಖರವಾಗಿರಲಿಲ್ಲ. ವರದಿಯನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದೆ.
ಇದಕ್ಕೂ ಮೊದಲು, ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು, ಅನಗತ್ಯ ವಿದೇಶ ಪ್ರವಾಸಗಳನ್ನು ತಪ್ಪಿಸಲು ಹಾಗೂ ಅಗತ್ಯವಿಲ್ಲದ ಚಿನ್ನ ಖರೀದಿಯಿಂದ ದೂರವಿರಲು ನಾಗರಿಕರಿಗೆ ಕರೆ ನೀಡಿದ್ದರು. ಅದರಂತೆ ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಮಿತವಾಗಿ ಬಳಸುವುದರಿಂದ ವಿದೇಶಿ ವಿನಿಮಯ ಉಳಿಸುವುದರ ಜೊತೆಗೆ ಜಾಗತಿಕ ಯುದ್ಧ ಪರಿಸ್ಥಿತಿಯ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದರು.
ಇದೇ ವೇಳೆ, ಇರಾನ್ ಸಂಘರ್ಷದ ಪರಿಣಾಮ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ನಷ್ಟ ಅನುಭವಿಸುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ₹3 ಹೆಚ್ಚಿಸಲಾಗಿದೆ.



