ಬೆಂಗಳೂರು: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಜಾತ್ಯತೀತ ಜನತಾದಳದ ಹಿರಿಯ ನಾಯಕ ಹೆಚ್.ಡಿ ದೇವೇಗೌಡ ಅವರು ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೇಶದ ವಿವಿಧ ರಾಜಕೀಯ ನಾಯಕರು, ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಗೌಡರಿಗೆ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಶುಭಾಶಯ ತಿಳಿಸಿ, “ಹೆಚ್.ಡಿ ದೇವೇಗೌಡ ಜೀ ಅವರು ಸಾರ್ವಜನಿಕ ಜೀವನದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀತಿ ವಿಷಯಗಳ ಕುರಿತು ಅವರ ಆಳವಾದ ಜ್ಞಾನ ಮತ್ತು ಹಿಂದುಳಿದ ವರ್ಗಗಳ ಸೇವೆಯ ಮೇಲಿನ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ” ಎಂದು ಬರೆದಿದ್ದಾರೆ. ದೇವೇಗೌಡರು ದೀರ್ಘಾಯುಷಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ದೇವೇಗೌಡರು ಇಂದು ಬೆಳಗ್ಗೆಯೇ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಮೊಮ್ಮಕ್ಕಳು ಪ್ರೀತಿಯಿಂದ ಅಪ್ಪಿಕೊಂಡು ಶುಭಾಶಯ ಕೋರಿದ ದೃಶ್ಯಗಳು ಕುಟುಂಬದ ಆತ್ಮೀಯತೆಯನ್ನು ಪ್ರತಿಬಿಂಬಿಸಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, “ಕಳೆದ ಐದು ವರ್ಷಗಳಿಂದ ನನ್ನ ಆರೋಗ್ಯಕ್ಕಾಗಿ ಪ್ರತಿ ಮಂಗಳವಾರ ಪೂಜೆ ಮಾಡಲಾಗುತ್ತಿದೆ. ಡಯಾಲಿಸಿಸ್ ಇರುವ ಕಾರಣ ತಿರುಪತಿಗೆ ತೆರಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಲ್ಲೇ ದೇವರ ಆಶೀರ್ವಾದ ಪಡೆದುಕೊಂಡಿದ್ದೇನೆ” ಎಂದು ಹೇಳಿದರು. ವಯಸ್ಸಾದರೂ ಜನಸೇವೆಯ ಉತ್ಸಾಹ ಕಡಿಮೆಯಾಗಿಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
“ನನಗೆ 94 ವರ್ಷ ಆಯಿತು ಎಂದು ಮನೆಯಲ್ಲಿ ಕೂತುಕೊಳ್ಳುವುದಿಲ್ಲ. ವ್ಹೀಲ್ಚೇರ್ನಲ್ಲಾದರೂ ಜನರ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತೇನೆ. ರಾಜ್ಯ ಹಾಗೂ ದೇಶದ ಸಮಸ್ಯೆಗಳು ಗಂಭೀರವಾಗಿವೆ. ಮೇ 20ರಂದು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾತನಾಡುತ್ತೇನೆ” ಎಂದು ದೇವೇಗೌಡರು ಘೋಷಿಸಿದರು.
ಕೇಂದ್ರ ಸಚಿವ ಹಾಗೂ ಪುತ್ರ ಎಚ್. ಡಿ. ಕುಮಾರಸ್ವಾಮಿ ಅವರು ತಂದೆಯೊಂದಿಗೆ ಇರುವ ಭಾವನಾತ್ಮಕ ಚಿತ್ರ ಹಂಚಿಕೊಂಡು, “ಹೋರಾಟ, ತ್ಯಾಗ ಮತ್ತು ಸಮರ್ಪಣೆಯಿಂದ ರಾಜಕೀಯದ ಉನ್ನತ ಸ್ಥಾನಕ್ಕೇರಿದ ಮಣ್ಣಿನ ಮಗ ದೇವೇಗೌಡರು. 94ರ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಹೋರಾಡುತ್ತಿರುವುದು ಎಲ್ಲರಿಗೂ ಮಾದರಿ” ಎಂದು ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಶುಭಾಶಯ ತಿಳಿಸಿ, “ನಾಡಿನ ಜನರ ಸೇವೆಯನ್ನು ಇನ್ನಷ್ಟು ಕಾಲ ಮುಂದುವರಿಸುವಂತೆ ದೇವರು ಅವರಿಗೆ ಆಯುರಾರೋಗ್ಯ ನೀಡಲಿ” ಎಂದು ಹಾರೈಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೂಡ ದೇವೇಗೌಡರ ರಾಜಕೀಯ ಅನುಭವ ಮತ್ತು ಜನಪರ ಹೋರಾಟವನ್ನು ಕೊಂಡಾಡಿದರು.
ಭಾರತೀಯ ರಾಜಕೀಯದಲ್ಲಿ ರೈತಪರ ಧ್ವನಿಯಾಗಿ ಗುರುತಿಸಿಕೊಂಡಿರುವ ದೇವೇಗೌಡರು, ವಯಸ್ಸಿನ ಮಿತಿಯನ್ನು ಮೀರಿ ಇನ್ನೂ ಜನಸೇವೆ ಮತ್ತು ಸಾರ್ವಜನಿಕ ಹಿತದ ಬಗ್ಗೆ ಕಾಳಜಿ ವಹಿಸುತ್ತಿರುವುದು ಹಲವರಿಗೆ ಪ್ರೇರಣೆಯಾಗಿದೆ. 94ನೇ ವಯಸ್ಸಿನಲ್ಲಿಯೂ ಅವರ ಚೈತನ್ಯ ಮತ್ತು ಹೋರಾಟದ ಮನೋಭಾವ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಉದಾಹರಣೆಯಾಗಿ ಉಳಿದಿದೆ.



