Monday, May 18, 2026
Google search engine

Homeರಾಜಕೀಯಜನತಾದಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಚಾಮುಂಡೇಶ್ವರಿ ಕ್ಷೇತ್ರ ಸಮಾವೇಶ

ಜನತಾದಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಚಾಮುಂಡೇಶ್ವರಿ ಕ್ಷೇತ್ರ ಸಮಾವೇಶ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಸಮಾರೋಪ ಸಮಾರಂಭ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯಾದ್ಯಂತ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯಶಸ್ವಿಯಾಗಿ ನಡೆದಿತ್ತು.

ಅಂತಿಮ ಹಾಗೂ 73ನೇ ಸಮಾವೇಶ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆಯಲ್ಲಿರುವ ನಾಗಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಅನುಪಸ್ಥಿತಿಯಲ್ಲೂ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಯಿತು. ಸಾವಿರಾರು ಕಾರ್ಯಕರ್ತರು ಇದಕ್ಕೆ ಸಾಕ್ಷಿಯಾದರು. ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರಷ್ಟೇ ಸಮಾವೇಶದಲ್ಲಿ ಭಾಗವಹಿಸಿದ್ದು ಮತ್ತೊಂದು ವಿಶೇಷ.

ಕಾರ್ಯಕ್ರಮಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಬಳಿಕ ಮಾಜಿ ಸಚಿವ ಸಾರಾ ಮಹೇಶ್, ಶಾಸಕ ಜಿ.ಡಿ.ಹರೀಶ್‍ಗೌಡ, ಎಂಎಲ್‍ಸಿ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‍ಕುಮಾರ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ತೆರೆದ ವಾಹನವೇರಿದ ನಿಖಿಲ್ ಕುಮಾರಸ್ವಾಮಿ ಅವರು, ಬೋಗಾದಿ ಸಿಗ್ನಲ್ ವೃತ್ತದಿಂದ ಮೆರವಣಿಗೆ ಮೂಲಕ ವೇದಿಕೆವರೆಗೆ ಬಂದರು. ಈ ವೇಳೆ ಜೆಸಿಬಿ ಮೂಲಕ ಬೃಹತ್ ಹಾರ ಹಾಕಲಾಯಿತು. ರಸ್ತೆಯ ಅಕ್ಕಪಕ್ಕ ನಿಂತಿದ್ದ ಸಾವಿರಾರು ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಪುಷ್ಪಮಳೆಗರೆದರು. ಅಲ್ಲದೆ ಘೋಷಣೆಗಳನ್ನು ಮೊಳಗಿಸಿದರು. ಮೆರವಣಿಗೆಗೆ ಜಾನಪದ ಕಲಾತಂಡಗಳು ಮತ್ತಷ್ಟು ಮೆರುಗು ನೀಡಿದವು.

ಜನರೊಂದಿಗೆ ಜನತಾದಳದ ಜಿಲ್ಲೆಯ ಕೊನೆಯ ಸಮಾವೇಶ ಇದಾಗಿದ್ದರಿಂದ ಹೆಚ್ಚು ಜನರನ್ನು ಸೇರಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ತಕ್ಕಂತೆ ಬೃಹತ್ ಶಾಮಿಯಾನ ಹಾಕಿ 35-40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಮಾವೇಶದ ಸ್ಥಳಕ್ಕೆ ಸಾವಿರಾರು ಕಾರ್ಯಕರ್ತರು ಬಸ್ ಹಾಗೂ ತಮ್ಮ ಸ್ವಂತ ವಾಹನಗಳಲ್ಲಿ ಆಗಮಿಸಲು ಆರಂಭಿಸಿದರು. ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆಗೆ ಆಸನಗಳೆಲ್ಲಾ ಭರ್ತಿಯಾಗಿದ್ದವು. ವೇದಿಕೆ ಮೇಲೆ ನಾಯಕರು ಭಾಷಣ ಮಾಡುತ್ತಿದ್ದರೆ ನೆರೆದಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸುತ್ತಿದ್ದರು. ತಮ್ಮ ನೆಚ್ಚಿನ ನಾಯಕರ ಭಾವಚಿತ್ರಗಳನ್ನು ಹಿಡಿದು ಅಭಿಮಾನ ಮೆರೆಯುತ್ತಿದ್ದರು. ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಜನರನ್ನು ನಿಯಂತ್ರಿಸಲು ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

RELATED ARTICLES
- Advertisment -
Google search engine

Most Popular