ಮೈಸೂರು: ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಯ ಅಂಗವಾಗಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಜೆಸಿಟಿಯು ವತಿಯಿಂದ ಗಾಂಧಿ ವೃತ್ತದಲ್ಲಿ ಮಹಾಧರಣಿ, ಬಹಿರಂಗ ಸಭೆ ನಡೆಸಲಾಯಿತು.
ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಆರಂಭಿಸಿದ ಕ್ವಿಟ್ ಇಂಡಿಯಾ ಚಳವಳಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರೂ ಕಾರ್ಮಿಕ ವರ್ಗ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದು, ಆಳುವ ಸರ್ಕಾರಗಳ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಹೋರಾಡುತ್ತಲೇ ಇದ್ದೇವೆ. ಆದರೂ ಸಮಸ್ಯೆಗಳು ಬಗೆಹರಿದಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವುದರಿಂದ ಸಂಘಟನೆ ಮಾಡುವ ಹಕ್ಕು ಮೊಟಕುಗೊಂಡಿದೆ. ಕೆಲಸದ ಅವಧಿಯನ್ನು ೯ ಗಂಟೆಯಿಂದ ೧೨ ಗಂಟೆಯವರೆಗೆ ಏರಿಕೆ ಮಾಡುವುದರ ಜತೆಗೆ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಮಾಡಿರುವ ಸರ್ಕಾರ ಮಹಿಳೆಯರನ್ನು ಶೋಷಣೆ ಮಾಡಲು ದಾರಿ ಮಾಡಿಕೊಟ್ಟಿದೆ ಎಂದು ಕಿಡಿ ಕಾರಿದರ
ಬೇಡಿಕೆಗಳು: ಕೆಲಸದ ಅವಧಿಯನ್ನು ೧೨ ಗಂಟೆಗೆ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು. ಜೀವನ ಯೋಗ್ಯ ಕನಿಷ್ಠ ವೇತನವನ್ನು ೩೧ ಸಾವಿರಕ್ಕೆ ಹೆಚ್ಚಿಸಬೇಕು. ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಮಾಡಬೇಕು. ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ, ಕನಿಷ್ಠ ೮ ಸಾವಿರ ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗಖಾತ್ರಿ ಯೋಜನೆ, ಮನರೇಗಾ, ದುಡಿತದ ದಿನಗಳನ್ನು ೨೦೦ಕ್ಕೆ ಏರಿಕೆ ಮಾಡಬೇಕು. ಸ್ಕೀಮ್ ಕಾರ್ಮಿಕರಾದ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ, ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿ ಮಾಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಿ, ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು. ೨೦೨೦ರ ವಿದ್ಯುತ್‌ಚ್ಛಕ್ತಿ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಹಿರಿಯ ರಂಗಕರ್ಮಿ ಬಸವಲಿಂಗಯ್ಯ, ಜೆಸಿಟಿಯು ಸಂಚಾಲಕ ಜಗನ್ನಾಥ್, ಎಐಟಿಯುಸಿಯ ಹೆಚ್.ಆರ್.ಶೇಷಾದ್ರಿ, ಹೆಚ್.ಬಿ.ರಾಮಕೃಷ್ಣ, ಸೋಮರಾಜೇ ಅರಸ್, ದೇವದಾಸ್.ಎನ್.ಕೆ, ಸಿಐಟಿಯುನ ಜಯರಾಮ್, ಬಾಲಾಜಿರಾವ್, ಅಣ್ಣಪ್ಪ, ಬಸವಯ್ಯ, ಲಾ.ಜಗನ್ನಾಥ್, ಎಐಯುಟಿಯುಸಿಯ ಚಂದ್ರಶೇಖರ ಮೇಟಿ, ಯಶೋದರ ರಾವ್, ಮುದ್ದುಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.