Sunday, April 20, 2025
Google search engine

Homeರಾಜ್ಯಸರ್ವರಿಗೂ ರಾಜಕೀಯ ಅಧಿಕಾರ ನೀಡಿದವರು ಅರಸು

ಸರ್ವರಿಗೂ ರಾಜಕೀಯ ಅಧಿಕಾರ ನೀಡಿದವರು ಅರಸು


ಮೈಸೂರು: ಹಿಂದುಳಿದ ಹಾಗೂ ಶೋಷಿತರಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಅವರನ್ನು ಸಾಮಾಜಿಕವಾಗಿ ಮುನ್ನೆಲೆಗೆ ತಂದ ದೇವರಾಜ ಅರಸು ಅವರು ನಿಜವಾಗಿಯೂ ಸಾಮಾನ್ಯ ಜನರ ಅರಸ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಹೇಳಿದರು.
ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲವಾಗಬೇಕಾದರೆ ರಾಜಕೀಯ ಅಧಿಕಾರ ಬಹಳ ಮುಖ್ಯ. ಇದನ್ನು ಮನಗಂಡಿದ್ದ ದೇವರಾಜ ಅರಸು ಅವರು ಸಣ್ಣಪುಟ್ಟ ಜನಾಂಗದವರಿಗೂ ರಾಜಕೀಯ ಅಧಿಕಾರ ನೀಡಿದರು ಎಂದು ಸ್ಮರಿಸಿದರು.
ಉಳುವವನಿಗೇ ಭೂಮಿ ಎಂಬ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಸುಮಾರು ೨೧ ಲಕ್ಷ ಹೆಕ್ಟೇರ್ ಪ್ರದೇಶವನ್ನು ಬಡವರಿಗೆ ನೀಡಿದ್ದು ಐತಿಹಾಸಿಕ ಚರಿತ್ರೆ. ಕಾಂಗ್ರೆಸ್ ಪಕ್ಷದ ಇಂತಹ ಚಾರಿತ್ರಿಕ ತೀರ್ಮಾನವನ್ನು ಜನರ ಬಳಿ ಕೊಂಡೊಯ್ಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಡಿ.ತಿಮ್ಮಯ್ಯ ಮಾತನಾಡಿ, ಮಾನವೀಯತೆಗೆ ಮತ್ತೊಂದು ಹೆಸರೇ ದೇವರಾಜ ಅರಸು. ಬಡವರಿಗೆ, ದೀನದಲಿತರಿಗೆ ಸಹಾಯ ಮಾಡುವ ಸಂದರ್ಭ ಎದುರಾದಲ್ಲಿ ಹಿಂದೆ ಮುಂದೆ ಯೋಚಿಸದೆ ಸಹಾಯ ಹಸ್ತ ಚಾಚುತ್ತಿದ್ದರು. ಅವರ ಬಳಿ ಸಹಾಯ ಪಡೆದವರಲ್ಲಿ ನಾನೂ ಕೂಡ ಒಬ್ಬ ಎಂದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮಾತನಾಡಿ, ರಾಜ್ಯದ ಜನರು ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದ್ದಾರೆ. ಆದರೆ, ದೇವರಾಜ ಅರಸರು ಮಾತ್ರ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಹಾದಿಯಲ್ಲೇ ಸಿದ್ದರಾಮಯ್ಯ ಅವರು ಕೂಡ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.
ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ವೇಳೆ ಹಾವನೂರು ಆಯೋಗ ರಚಿಸುವ ಮೂಲಕ ಅವರು ನೀಡಿದ ವರದಿ ಆಧಾರದ ಮೇಲೆ ಹಿಂದುಳಿದ ವರ್ಗಗಳ ಜನರಿಗೆ ವಿದ್ಯೆ, ಉದ್ಯೋಗ, ರಾಜಕೀಯ ಅಧಿಕಾರದ ಅವಕಾಶಗಳನ್ನು ಒದಗಿಸಿಕೊಟ್ಟರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುವಾರ್, ಮಾಜಿ ಮೇಯರ್‌ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಎಂ.ಸಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಆರ್.ಸೋಮಸುಂದರ್, ಶಿವಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್.ಗೌಡ, ಈಶ್ವರ ಚಕ್ಕಡಿ, ಲತಾ ಸಿದ್ದಶೆಟ್ಟಿ, ಅಬು ಅಹಮದ್, ಪಾರ್ಥಸಾರಥಿ, ಯೋಗೇಶ್ ಉಪ್ಪಾರ್, ಪ್ರಕಾಶ್ ಕುಂಬಾರ, ಕೆ.ಎಸ್.ಶಿವರಾಂ, ಆರ್.ನಾಗೇಶ್, ಕೆ.ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್
ದೇವರಾಜ ಅರಸರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಯುವಕರಿಗೆ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಾಕ್ಷ್ಯ ಚಿತ್ರ ಸಿದ್ಧಪಡಿಸಿ ಯುವ ಪೀಳಿಗೆಗೆ ಅವರ ಬಗ್ಗೆ ಜಾಗೃತಿ ಮೂಡಿಸಬೇಕು.
-ದರ್ಶನ್ ಧ್ರುವನಾರಾಯಣ್, ಶಾಸಕ

RELATED ARTICLES
- Advertisment -
Google search engine

Most Popular