Monday, May 25, 2026
Google search engine

Homeರಾಜ್ಯಜೂನ್‌ನಲ್ಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ಆರಂಭ : ಮೋದಿ ಚಾಲನೆ

ಜೂನ್‌ನಲ್ಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ಆರಂಭ : ಮೋದಿ ಚಾಲನೆ

ಮಂಗಳೂರು : ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಜೂನ್ ತಿಂಗಳಲ್ಲೇ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು-ಹಾಸನ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ಈ ಭಾಗದಲ್ಲಿ ವೇಗದ ರೈಲು ಸಂಪರ್ಕಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ಕುರಿತು ಪ್ರತಿಕ್ರಿಯಿಸಿದ ಸಚಿವರು, ಕರಾವಳಿ ಭಾಗದ ಸಂಸದರು ರೈಲು ಸಂಪರ್ಕ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಈ ಬೇಡಿಕೆಯನ್ನು ರೈಲ್ವೆ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ ಎಂದರು.

ಅಲ್ಲದೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು 332 ಕಿ.ಮೀ ಉದ್ದದ ಈ ಯೋಜನೆಗೆ ಅಂದಾಜು 3,300 ಕೋಟಿ ರೂ. ವೆಚ್ಚವಾಗಲಿದೆ. ಹಾಸನ-ಮಂಗಳೂರು ನಡುವಿನ 247 ಕಿ.ಮೀ ದ್ವಿಪಥ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ಪ್ರಗತಿಯಲ್ಲಿದೆ. ಜೊತೆಗೆ, ಶೋರ್ನೂರು-ಮಂಗಳೂರು ನಡುವಿನ 3ನೇ ಹಾಗೂ 4ನೇ ರೈಲು ಮಾರ್ಗಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದ್ದು, ಈ ಮಾರ್ಗದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲು ಸಂಚರಿಸುವಂತೆ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪನೆ ಮತ್ತು ದಕ್ಷಿಣ ರೈಲ್ವೆಯ ಮೈಸೂರು ವಿಭಾಗ, ದಕ್ಷಿಣ ಪಶ್ಚಿಮ ರೈಲ್ವೆ ಹಾಗೂ ಕೊಂಕಣ ರೈಲ್ವೆಯನ್ನು ಒಂದೇ ಆಡಳಿತಾತ್ಮಕ ವ್ಯವಸ್ಥೆಯಡಿ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ ನಿರ್ಮಾಣ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರೈಲ್ವೆ ಯೋಜನೆಗಳಿಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಪಾವತಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಆರೋಪಿಸಿದ ಸಚಿವರು, ಮುಂದಿನ ದಿನಗಳಲ್ಲಿ ಭೂಸ್ವಾಧೀನ ಪರಿಹಾರವನ್ನು ರೈಲ್ವೆ ಇಲಾಖೆ ನೇರವಾಗಿ ಪಾವತಿಸಲಿದೆ ಎಂದರು.

ಮಂಗಳೂರು ಜಂಕ್ಷನ್‌ನಲ್ಲಿ 38 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿವೆ. ಸರಕು ಸಾಗಣೆ ರೈಲುಗಳಿಗಾಗಿ ಹೆಚ್ಚುವರಿ ಹಳಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ಮಂಗಳೂರು ರೈಲ್ವೆ ಅಭಿವೃದ್ಧಿಗೆ ಸಮಗ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿಯನ್ನು ನಿಯೋಜಿಸಲು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ, ಮಂಗಳೂರು-ಸುಬ್ರಹ್ಮಣ್ಯ ನಡುವೆ MEMU ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನೂ ಶೀಘ್ರ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular