Monday, May 25, 2026
Google search engine

Homeರಾಜ್ಯಸೋಲಾರ್ ತಂತಿಬೇಲಿಗೂ ಮಂಕುಬಿದ್ದ ಕಾಡಾನೆಗಳು ! ಕಾಫಿ ಗಿಡ ಬಳಸಿ ತೋಟಕ್ಕೆ ಎಂಟ್ರಿ

ಸೋಲಾರ್ ತಂತಿಬೇಲಿಗೂ ಮಂಕುಬಿದ್ದ ಕಾಡಾನೆಗಳು ! ಕಾಫಿ ಗಿಡ ಬಳಸಿ ತೋಟಕ್ಕೆ ಎಂಟ್ರಿ

ಬೇಲೂರು : ಕಾಫಿತೋಟದ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿಬೇಲಿಯನ್ನು ದಾಟಲು ಕಾಡಾನೆಗಳು ಚಾಣಾಕ್ಷತನ ಪ್ರದರ್ಶಿಸಿದ ಘಟನೆ ತಾಲೂಕಿನ ಹೊಸಮನೆ ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಈ ವರ್ತನೆ ಮಲೆನಾಡು ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಅರೇಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಬೆಳೆ ನಾಶ ಹಾಗೂ ಜನರ ಮೇಲೆ ದಾಳಿ ಮಾಡುವ ಘಟನೆಗಳು ಸಾಮಾನ್ಯವಾಗಿವೆ. ಇತ್ತೀಚೆಗೆ ಹೊಸಮನೆ ಗ್ರಾಮದ ಶ್ರೀನಿವಾಸ್ ಅವರಿಗೆ ಸೇರಿದ ತೋಟದಲ್ಲಿ ಐದು ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು.

ಕೆಲ ಸಮಯದ ನಂತರ ಪಕ್ಕದ ತೋಟಕ್ಕೆ ತೆರಳಲು ಯತ್ನಿಸಿದ ಆನೆಗಳು ಸೋಲಾರ್ ಬೇಲಿಯನ್ನು ನೇರವಾಗಿ ದಾಟದೆ, ತೋಟದಲ್ಲಿದ್ದ 50ಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಸಣ್ಣ ಮರಗಳನ್ನು ಕಿತ್ತು ತಂತಿಬೇಲಿಯ ಮೇಲೆ ಹಾಕಿ ನಂತರ ಅದನ್ನು ದಾಟಿ ಮುಂದಕ್ಕೆ ಸಾಗಿವೆ.

ಈ ದೃಶ್ಯವನ್ನು ಕಣ್ಣಾರೆ ಕಂಡ ರೈತರು ಬೆಚ್ಚಿಬಿದ್ದಿದ್ದಾರೆ. ಕಾಡಾನೆಗಳ ಬುದ್ಧಿವಂತಿಕೆಯ ನಡೆ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಘಟನೆಯ ಬಳಿಕ ಗ್ರಾಮಸ್ಥರು ನಾಯಿಯ ಸಹಾಯದಿಂದ ಕಾಡಾನೆಗಳನ್ನು ಓಡಿಸಲು ಮುಂದಾದರು. ಆದರೆ ನಾಯಿಯನ್ನು ಕಂಡ ಕಾಡಾನೆಯೊಂದು ಆಕ್ರೋಶಗೊಂಡು ನಾಯಿಯ ಜೊತೆಗೆ ಜನರನ್ನೂ ಅಟ್ಟಾಡಿಸಿದೆ. ಅದೃಷ್ಟವಶಾತ್ ಸೋಲಾರ್ ಬೇಲಿ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆಯನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ.

ಅರೇಹಳ್ಳಿ ಹೋಬಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ತೋಟ ಹಾಗೂ ಗದ್ದೆಗಳಿಗೆ ತೆರಳಲು ಭಯಪಡುವಂತಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular