ಮೈಸೂರು: ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಇ-ಖಾತೆ ಮಾಡಿಕೊಟ್ಟಿದ್ದ ಆರೋಪ ಹೊತ್ತಿದ್ದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಮಂಜುನಾಥ್ ರನ್ನು ಪೌರಾಡಳಿತ ನಿರ್ದೇಶನಾಲಯವು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಂದಾಯ ನಿರೀಕ್ಷಕ ಮಂಜುನಾಥ್ ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರ ಹಾಗೂ ಸಾರ್ವಜನಿಕರಿಗೆ ಸಹಕರಿಸದಿರುವ ಬಗ್ಗೆ ಹಾಗೂ ಸರ್ಕಾರಿ ಆಸ್ತಿಯನ್ನು ಕಾನೂನು ಬಾಹಿರವಾಗಿ ಬೇರೊಬ್ಬರಿಗೆ ನೊಂದಣಿ ಮಾಡಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಉಪ ಆಯುಕ್ತರಿಗೆ ಪತ್ರ ಬರೆದಿದ್ದ ಮೈಸೂರು ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತ ರೆಡ್ಡಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಅವರು ನೀಡಿದ ವರದಿಯ ಆಧಾರದ ಮೇರೆಗೆ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಮುಖ್ಯಾಧಿಕಾರಿ ಮಹೇಶ್ ಶ್ರೇಣಿ-1ರ ವ್ಯಾಪ್ತಿಗೆ ಬರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎನ್.ರವೀಂದ್ರ, ಕಂದಾಯ ನಿರೀಕ್ಷಕ ಮಂಜುನಾಥ್ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ತಕ್ಷಣದಿಂದ ಜಾರಿಗೆ ಬರುವಂತೆ ಮಂಜುನಾಥ್ ಸೇವೆ ಸ್ಥಾನ ಬದಲಾವಣೆ ಮಾಡಲಾಗಿದ್ದು, ಹಾಸನ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಲಾಗಿದೆ.



