ಗೌರಿಬಿದನೂರು : ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಅಗತ್ಯವಾದ ಕಾನೂನು ನೆರವು ಒದಗಿಸಲು ನ್ಯಾಯಾಲಯ ಸದಾ ಬದ್ಧವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್ ಹೇಳಿದರು.
ನಗರದ ಸಿಲ್ವರ್ ಪಾರ್ಕ್ ಅಪಿರಿಯನ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಸಮಾಜದ ಹಾಗೂ ದೇಶದ ಆರ್ಥಿಕ ಬೆನ್ನುಲುಬಾಗಿದ್ದು, ಅವರಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯ. ಬಡ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಉಚಿತ ಕಾನೂನು ಸಲಹೆ ಹಾಗೂ ನೆರವು ಪಡೆಯಬಹುದಾಗಿದೆ ಎಂದರು. ಆಸ್ತಿ ವಿವಾದ, ಕುಟುಂಬ ಕಲಹ ಸೇರಿದಂತೆ ಯಾವುದೇ ಕಾನೂನು ಸಮಸ್ಯೆಗಳ ಕುರಿತು ಸಂಕೋಚವಿಲ್ಲದೆ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸುವಂತೆ ಕರೆ ನೀಡಿದರು.
ತಾ.ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಟಿ.ಪಿ ಮಾತನಾಡಿ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಹರೀಶ್ ಕುಮಾರ್.ಎಸ್ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಬಾರದು. ವೇತನವನ್ನು ನಿಗದಿತ ಅವಧಿಯೊಳಗೆ ಪಾವತಿಸಬೇಕು ಹಾಗೂ ಎಂಟು ಗಂಟೆಗೂ ಹೆಚ್ಚು ಕೆಲಸ ಮಾಡಿದರೆ ದ್ವಿಗುಣ ವೇತನ ನೀಡಬೇಕು ಎಂದರು. 20 ದಿನ ಕೆಲಸ ಮಾಡಿದ ಕಾರ್ಮಿಕರಿಗೆ ಒಂದು ದಿನ ರಜೆ ಸೌಲಭ್ಯವಿದ್ದು, ಮಹಿಳಾ ಕಾರ್ಮಿಕರ ಸುರಕ್ಷತೆಗೆ ವಿಶೇಷ ಕಾನೂನುಗಳಿವೆ ಎಂದರು.
ಇನ್ನು ಹೆಚ್ಚಿನ ಕಾರ್ಮಿಕರು ಇರುವ ಕಾರ್ಖಾನೆಗಳಲ್ಲಿ ಶಿಶುಪಾಲನಾ ಕೇಂದ್ರ ಹಾಗೂ ಕ್ಯಾಂಟೀನ್ ವ್ಯವಸ್ಥೆ ಕಡ್ಡಾಯವಾಗಿದ್ದು, ಮಹಿಳೆಯರ ಮೇಲಿನ ಕಿರುಕುಳ ಅಥವಾ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ‘ಶೀ ಪೋರ್ಟಲ್’ ಮೂಲಕ ಗೌಪ್ಯವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಸಿಲ್ವರ್ ಪಾರ್ಕ್ ಅಪಿಯರೆನ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜರ್ ದಿಲೀಪ್ ಕುಮಾರ್ ರೆಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಬಿ.ಲಿಂಗಪ್ಪ, ವಕೀಲರು ಹಾಗೂ ಸಿಲ್ವರ್ ಪಾರ್ಕ್ ಅಪಿರಿಯನ್ಸ್ ಲಿಮಿಟೆಡ್ ನ ಸಿಬ್ಬಂದಿ, ಕಾರ್ಮಿಕರು, ತಾಂತ್ರಿಕ ವರ್ಗದವರು ಸೇರಿದಂತೆ ಹಲವು ಗಣ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.



