ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಜೋರಾಗಿರುವ ನಡುವೆಯೇ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ದಿಢೀರ್ ಮುಂಬೈ ಪ್ರವಾಸ ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಸಂಬಂಧಿಕರ ಅನಾರೋಗ್ಯದ ಹಿನ್ನೆಲೆ ರಾಜ್ಯಪಾಲರು ಬುಧವಾರ ತಡರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ಅಲ್ಲಿಂದ ಅವರು ಇಂದೋರ್‌ಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದಾಗಿ ತಿಳಿದುಬಂದಿದ್ದು, ಲೋಕಭವನ ಗುರುವಾರ ಬೆಳಗ್ಗೆ 11.30 ಹಾಗೂ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಆದರೆ ಮುಖ್ಯಮಂತ್ರಿ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯಪಾಲರು ರಾಜಧಾನಿ ತೊರೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನೊಂದೆಡೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಆಡಳಿತ ಹಾಗೂ ವಿರೋಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಪ್ರವಾಸ ಮಹತ್ವ ಪಡೆದುಕೊಂಡಿದ್ದು, ವಿವಿಧ ರಾಜಕೀಯ ನಾಯಕರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಆರಂಭಿಸಿದ್ದಾರೆ.
ರಾಜ್ಯಪಾಲರು ಇಂದೇ ಮರಳುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅವರು ಮಧ್ಯಾಹ್ನದ ನಂತರ ಮರಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.



