ಬೆಂಗಳೂರು : ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕ, ಗೋವಾ ಮತ್ತು ಕೇರಳ ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ಅವರು ವಿವಿಧ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಪ್ರವಾಸದ ಮೊದಲ ದಿನ, ಉಪರಾಷ್ಟ್ರಪತಿಗಳು ಬೆಂಗಳೂರಿನಲ್ಲಿ ‘ಆರ್ಟ್ ಆಫ್ ಲಿವಿಂಗ್ ಫೌಂಡೇಶನ್’ನ 45ನೇ ವಾರ್ಷಿಕೋತ್ಸವದ ಜಾಗತಿಕ ಸಮಾರಂಭದಲ್ಲಿ ಭಾಗವಹಿಸಿದರು. ನಂತರ, ಕರ್ನಾಟಕದ ದಾವಣಗೆರೆಯಲ್ಲಿರುವ ‘ಯೂನಿವರ್ಸಿಟಿ ಬಿಡಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್’ನ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಪಾಲ್ಗೊಂಡರು.
ನಾಳೆ ಪಣಜಿಯಲ್ಲಿ ನಡೆಯಲಿರುವ ಗೋವಾ ರಾಜ್ಯದ ‘ರಾಜ್ಯ ಸ್ಥಾಪನಾ ದಿನ’ದ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ. ಅದೇ ದಿನ ಅವರು ಗೋವಾದಲ್ಲಿರುವ ‘ಸಿಎಸ್ ಐಆರ್–ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನೋಗ್ರಫಿ’ಗೆ ಭೇಟಿ ನೀಡಲಿದ್ದಾರೆ.
ನಾಳಿದ್ದು ಪ್ರವಾಸದ ಕೊನೆಯ ದಿನವಾಗಿದ್ದು ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ನಂತರ ಬೆಳ್ತಂಗಡಿಯಲ್ಲಿ ‘ಸಿರಿ (SIRI) ಇಂಡಸ್ಟ್ರಿಯಲ್ ಪಾರ್ಕ್’ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕೇರಳಕ್ಕೆ ತೆರಳಲಿದ್ದು, ಕೋಟ್ಯಂನಲ್ಲಿ ‘ದೀಪಿಕಾ ಮಲಯಾಳಂ ದಿನಪತ್ರಿಕೆ’ಯ 140ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸುವರು. ಅಂತಿಮವಾಗಿ ಅವರು ಕಣ್ಣೂರಿಗೆ ಭೇಟಿ ನೀಡಿ, ರಾಜ್ಯಸಭಾ ಸದಸ್ಯ ಸಿ. ಸದಾನಂದನ್ ಮಾಸ್ಟರ್ ಆಯೋಜಿಸಿರುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.



