ಕೆ.ಆರ್.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ದೂರ ದೃಷ್ಟಿಯಿಂದ ಹಳೇ ಮೈಸೂರು ಭಾಗ ಸ್ವಾತಂತ್ರ್ಯ ಪೂರ್ವದಲ್ಲೇ ಅಭಿವೃದ್ದಿ ಕಂಡಿದ್ದು ಜನತೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದ್ದು, ಈಗಿನ ಚುನಾಯಿತ ಸದಸ್ಯರು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಗರುಡಗಂಭ ವೃತ್ತದಲ್ಲಿರುವ ಒಡೆಯರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಅವರು ಒಡೆಯರ್ ಕುಟುಂಬ ರಾಜ ಮನೆತನಕ್ಕೆ ಮಾತ್ರ ಸೀಮಿತಗೊಳ್ಳದೆ ಗ್ರಾಮೀಣ ಭಾಗದ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.
ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನೂರು ವರ್ಷಗಳ ಹಿಂದೆಯೇ ಚಾಮರಾಜ ಎಡ ಮತ್ತು ಬಲ ದಂಡೆ ನಾಲೆಗಳನ್ನು ನಿರ್ಮಾಣ ಮಾಡುವ ಮೂಲಕ ಕೆ.ಆರ್.ನಗರ ಕ್ಷೇತ್ರ ಭತ್ತದ ಕಣಜ ಎಂದು ಪ್ರಸಿದ್ದಿ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದ ಶಾಸಕರು ರೈತರ ಕೃಷಿ ಜಮೀನು ನೀರಾವರಿ ಪ್ರದೇಶವಾಗಲು ಕಾರಣರಾದ ಒಡೆಯರ್‌ರವರ ಭಾವಚಿತ್ರ ಕ್ಷೇತ್ರದ ಪ್ರತಿ ಮನೆಯಲ್ಲಿರುವುದೇ ರಾಜರ ಅಭಿವೃದ್ದಿಗೆ ಕಾರ್ಯಕ್ಕೆ ಸಾಕ್ಷಿ ಎಂದು ಬಣಿಸಿದರು.
ಐಷಾರಾಮಿ ಜೀವನ ನಡೆಸಬೇಕಿದ್ದ ರಾಜಮನೆತನಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದ ಮೈಸೂರು ರಾಜರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದಲ್ಲದೆ, ಎಸ್‌ಬಿಎಂ ಬ್ಯಾಂಕ್ ಆರಂಭಿಸಿ ಈ ಭಾಗದ ನಾಗರೀಕರ ಆರ್ಥಿಕ ಚಟುವಟಿಕೆಗೆ ಅನುಕೂಲ ಕಲ್ಪಿಸಿದರು. ಇದರ ಜತೆಗೆ ಸಾಕ್ಷರತಾ ಆಂದೋಲನ ಆರಂಭಿಸಿ ಮೈಸೂರು ರಾಜ್ಯದ ಜನತೆ ಶಿಕ್ಷಿತರಾಗಲು ಕಾರಣರಾಗಿದ್ದರು ಇಂತಹಾ ರಾಜರನ್ನು ಸ್ಮರಿಸಬೇಕಾದ್ದದ್ದು ನಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಮೈಸೂರು ಪ್ರಾಂತ್ಯದ ರೈತರಿಗೆ ಅನುಕೂಲ ಮಾಡಬೇಕು ಎಂಬ ಉದ್ದೇಶದಿಂದ ಕೃಷ್ಣರಾಜ ಸಾಗರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣ್ಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಣಕಾಸು ಕೊರತೆಯಾದಾಗ ಕೃಷ್ಣರಾಜ ಒಡೆಯರ್‌ರವರು ಅರಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಅಣ್ಣೆಕಟ್ಟು ನಿರ್ಮಾಣ ಮಾಡಿ ರೈತರ ಜಮೀನಿಗೆ ನೀರು ಹರಿಸಲು ಶ್ರಮಿಸಿದ್ದರು ಇಂತಹಾ ಮಹಾನ್ ಚೇತನರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕೃಷ್ಣರಾಜ ಒಡೆಯರ್‌ರವರು ಮೈಸೂರು ಭಾಗದಲ್ಲಿ ಈಗಿನ ವಿಧಾನ ಪರಿಷತ್ ಅನ್ನು ಅಂದೇ ಸ್ಥಾಪಿಸಿ ಆಯಾ ಭಾಗದ ಮುಖಂಡರುಗಳನ್ನು ಸದಸ್ಯರನ್ನಾಗಿ ಮಾಡಿಕೊಂಡು ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದರು ಮೈಸೂರು ರಾಜರ ಆಡಳಿತ ಈಗಿನ ರಾಜ್ಯ ಸರ್ಕಾರಕ್ಕೆ ಮಾದರಿಯಾಗಿದೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಆರಂಭಿಸಿ ಯುವ ಜನತೆಗೆ ಉದ್ಯೋಗ ನೀಡಿದ ಕೀರ್ತಿ ಮೈಸೂರು ರಾಜರಿಗೆ ಸಲ್ಲುತ್ತದೆ ಇವರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಕಚೇರಿ ವತಿಯಿಂದ ನೀಡಲಾದ ವಿವಿಧ ಮಾಶಾಸನದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ರವಿಶಂಕರ್ ವಿತರಿಸಿದರು. ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಬಿ.ಎಸ್.ತೋಂಟದಾರ್ಯ, ಸೌಮ್ಯಲೋಕೇಶ್, ಮುಖ್ಯಾಧಿಕಾರಿ ಸುಧಾರಾಣಿ, ಅಧಿಕಾರಿಗಳಾದ ಲೋಕೇಶ್, ಯೋಗೀಶ್‌ಕುಮಾರ್, ರಾಜೇಂದ್ರ, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್, ಸಿಡಿಪಿಒ ಪೂರ್ಣಿಮ, ಸಿಪಿಐ ರೇವಣ್ಣ, ಮುಖಂಡರಾದ ಹೆಚ್.ಪಿ.ಪ್ರಶಾಂತ್, ಕೆ.ಪಿ.ಜಗದೀಶ್, ಚೆಲುವರಾಜು, ಹಂಪಾಪುರನಾಗರಾಜು, ಮಹದೇವ್ ಸೇರಿದಂತೆ ಇನ್ನಿತರರು ಹಾಜರಿದ್ದರು.