ಮೈಸೂರು : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯದ ಹಿನ್ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ.
ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹಸಿರು ಸಂಪೂರ್ಣವಾಗಿ ಮಾಯವಾಗಿದ್ದು, ತಿನ್ನಲು ಹಸಿರು ಹುಲ್ಲು ಸಿಗದೆ ಕಾಡಾನೆಗಳು ಪರದಾಡುತ್ತಿವೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಅಲ್ಲಲ್ಲಿ ಮಾತ್ರ ಗರಿಕೆ ಬೆಳೆದಿದ್ದು, ಆನೆಗಳು ಕಾಲಿನಿಂದ ಒಣಗಿದ ಮಣ್ಣನ್ನು ಒದ್ದು, ಹುಲ್ಲಿನ ಬೇರುಗಳನ್ನು ಬೇರ್ಪಡಿಸಿ ತಿನ್ನುತ್ತಿರುವ ದೃಶ್ಯ ಕಾಣಿಸಿದೆ. ನೀರಿಲ್ಲದೆ ಬಣಗುಡುತ್ತಿರುವ ನೆಲದಲ್ಲಿ ಆಹಾರಕ್ಕಾಗಿ ಕಾಡಾನೆಗಳು ಪರದಾಡುತ್ತಿವೆ.



