Tuesday, June 2, 2026
Google search engine

Homeರಾಜ್ಯಆರು ತಿಂಗಳಲ್ಲಿ ಕಾಗದರಹಿತವಾಗಲಿದೆ ಕರ್ನಾಟಕ ವಿಧಾನಮಂಡಲ : ಐಪ್ಯಾಡ್ ಮೂಲಕ ನಡೆಯಲಿವೆ ವಿಧಾನಸಭೆ-ಪರಿಷತ್ ಕಲಾಪಗಳು

ಆರು ತಿಂಗಳಲ್ಲಿ ಕಾಗದರಹಿತವಾಗಲಿದೆ ಕರ್ನಾಟಕ ವಿಧಾನಮಂಡಲ : ಐಪ್ಯಾಡ್ ಮೂಲಕ ನಡೆಯಲಿವೆ ವಿಧಾನಸಭೆ-ಪರಿಷತ್ ಕಲಾಪಗಳು

ಮಂಗಳೂರು : ಕರ್ನಾಟಕ ವಿಧಾನಮಂಡಲವು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು ಕಾಗದ ರಹಿತವಾಗಿ ಬದಲಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ. ಇನ್ಮುಂದೆ ಅಧಿವೇಶನದ ಅವಧಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಕಾಗದದ ಕಡತಗಳ ಬದಲಿಗೆ ಇನ್‌ಬಿಲ್ಟ್ ಅಪ್ಲಿಕೇಶನ್ ಒಳಗೊಂಡಿರುವ ಐಪ್ಯಾಡ್‌ಗಳನ್ನು ಬಳಸಲಿದ್ದಾರೆ. ಈ ಮಹತ್ವಾಕಾಂಕ್ಷಿ ನಿರ್ಧಾರದಿಂದಾಗಿ ಮುದ್ರಣ ಮತ್ತು ಸಾಗಣೆಗೆ ತಗಲುತ್ತಿದ್ದ ಕೋಟ್ಯಂತರ ರೂಪಾಯಿ ವೆಚ್ಚ ಹಾಗೂ ಕಾಗದದ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಈ ಡಿಜಿಟಲ್ ಕ್ರಾಂತಿಗಾಗಿ ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ ಜಂಟಿಯಾಗಿ ‘ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA)’ ಯೋಜನೆಯೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಈ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ‘ನೆವಾ’ ಮತ್ತು ರಾಜ್ಯ ಉಸ್ತುವಾರಿ ಸಮಿತಿಯ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣಸೌಧದ ವಿಧಾನಸಭೆ ಕಲಾಪಗಳ ಡಿಜಿಟಲೀಕರಣಕ್ಕೆ 78 ಕೋಟಿ ರೂ. ಹಾಗೂ ವಿಧಾನಪರಿಷತ್ ಡಿಜಿಟಲೀಕರಣಕ್ಕೆ 52 ಕೋಟಿ ರೂ. ಸೇರಿ ಒಟ್ಟು 130 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಶೇ 60 ರಷ್ಟು ಪಾಲನ್ನು ನೀಡಲಿದೆ.

ಅಧಿವೇಶನದ ದಿನದ ಕಾರ್ಯಸೂಚಿ ಪ್ರಶ್ನೋತ್ತರಗಳು ಹಾಗೂ ಮಂಡನೆಯಾಗುವ ಎಲ್ಲಾ ವಿಧೇಯಕಗಳನ್ನು ಶಾಸಕರಿಗೆ ಇ-ಫಾರ್ಮ್ಯಾಟ್ (ಡಿಜಿಟಲ್) ಮೂಲಕವೇ ಸುಲಭವಾಗಿ ಸಿಗುವಂತೆ ಕಳುಹಿಸಲಾಗುತ್ತದೆ. ಇದರಿಂದಾಗಿ ಕಡತಗಳು ಕಾಣೆಯಾಗುವ ಭೀತಿ ಇರುವುದಿಲ್ಲ. ಅಧಿವೇಶನದ ಸಮಯದಲ್ಲಿ ಶಾಸಕರ ಮೇಜುಗಳಿಗೆ ಐಪ್ಯಾಡ್‌ಗಳನ್ನು ಅಳವಡಿಸಲಾಗುತ್ತದೆಯಲ್ಲದೆ, ಕಲಾಪ ಮುಗಿದ ನಂತರ ಅವುಗಳನ್ನು ಸುರಕ್ಷಿತವಾಗಿ ತೆಗೆದಿಡಲಾಗುತ್ತದೆ. ಈ ವ್ಯವಸ್ಥೆಯನ್ನು ಬಳಸಲು ಎಲ್ಲಾ ಶಾಸಕರಿಗೂ ವಿಶೇಷ ತರಬೇತಿ ನೀಡಲಾಗುವುದು ಎಂದು ಸ್ಪೀಕರ್ ತಿಳಿಸಿದ್ದಾರೆ.

ಕೇವಲ ಕಲಾಪ ಮಾತ್ರವಲ್ಲದೆ ಶಾಸಕರ ಹಾಜರಾತಿ ವ್ಯವಸ್ಥೆಯನ್ನು ಕೂಡ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದರೊಂದಿಗೆ, ವಿಧಾನಸೌಧದ ವಿವಿಧ ಮಹಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳು ಹಾಗೂ ಅಧಿಕಾರಿಗಳ ವಿವರಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ವಿಧಾನಮಂಡಲದ ಐಟಿ ತಂಡವು ಸೌಧದ ಆವರಣದಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular