Sunday, June 7, 2026
Google search engine

Homeರಾಜಕೀಯಬೆಟ್ಟಿಂಗ್ ಆರೋಪಕ್ಕೆ ಕಪ್ಪಡಿ ಗದ್ದುಗೆ ಬಳಿ ಜೆಡಿಎಸ್ ಎರಡು ಬಣಗಳ ಹೈಡ್ರಾಮಾ

ಬೆಟ್ಟಿಂಗ್ ಆರೋಪಕ್ಕೆ ಕಪ್ಪಡಿ ಗದ್ದುಗೆ ಬಳಿ ಜೆಡಿಎಸ್ ಎರಡು ಬಣಗಳ ಹೈಡ್ರಾಮಾ

ಕೆ.ಆರ್.ನಗರ : ಕಳೆದ ಒಂದು ವಾರದ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಕೋಟೆ ಹುಂಡಿ ಮಾದೇಗೌಡ ಅವರ ವಿಚಾರಕ್ಕೆ ಸಂಬಂಧಪಟ್ಟ ಪರ‌ ಮತ್ತು ವಿರೋಧದ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳು ತಾರ್ತಿಕ ಅಂತ್ಯಕ್ಕೆ ತಲುಪಿ ಶುಕ್ರವಾರ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

ಕೋಟೆಹುಂಡಿ ಮಾದೇಗೌಡ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡರ ಗಮನಕ್ಕೆ ತಾರದೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಇಷ್ಟೆಲ್ಲಾ ರಾದಾಂತಕ್ಕೆ ಕಾರಣವಾಗಿದ್ದು ಕೆ.ಆರ್.ನಗರ ಮತ್ತು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಪ್ರಮುಖರ ಚರ್ಚೆ ಮತ್ತು ಸಣ್ಣ ಘರ್ಷಣೆಗೆ ಕಾರಣವಾಯಿತು.

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ‌ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದ ನಿಖಿಲ್‌ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲ ಪಡೆದಿದ್ದ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಬೆಟ್ಟಿಂಗ್ ಕಟ್ಟಿದ್ದ ವಿಷಯ ಎಲ್ಲ ಘರ್ಷಣೆಗೆ ಮೂಲವಾಗಿತ್ತು.

ಮಾಜಿ‌ ಸಚಿವ ಸಾ.ರಾ.ಮಹೇಶ್ ಸಹೋಧರ ಜಿ.ಪಂ.ಮಾಜಿ ಸದಸ್ಯ ಸಾ.ರಾ.ನಂದೀಶ್ ಸುಮಲತ ಅಂಬರೀಶ್ ಅವರು ಚುನಾವಣೆಯಲ್ಲಿ ಜಯಶೀಲರಾಗುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದ್ದು ಅವರ ವಿರುದ್ದ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಹೂಟ್ಟಗಳ್ಳಿ ಸುರೇಶ್ ಪ್ರಶ್ನೆ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪಕ್ಷ ನಿಷ್ಠೆ ಮತ್ತು ಬೆಟ್ಟಿಂಗ್ ವಿಚಾರವಾಗಿ ವ್ಯಾಪಕ‌ ಚರ್ಚೆ ನಡೆದು ಆನಂತರ ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಸಮೀಪದ ಕಾವೇರಿ‌ ನದಿ‌ ತೀರದಲ್ಲಿ ಸತ್ಯ ಮತ್ತು ನಿಷ್ಠೆಗೆ ಹೆಸರಾಗಿರುವ ಕಪ್ಪಡಿ ಕ್ಷೇತ್ರಕ್ಕೆ ಬಂದು ಆಣೆ ಮತ್ತು ಪ್ರಮಾಣ ಮಾಡಲು ಪಂಥಾಹ್ವಾನ ನೀಡುವ ವರೆಗೂ ವಿಚಾರ ಗಂಬೀರತೆ ಪಡೆದುಕೊಂಡಿತ್ತು.

ತಮ್ಮ ಮೇಲೆ ಬಂದಿದ್ದ ಆರೋಪ ಸುಳ್ಳು ಎಂದು ಸಾಬೀತು ಪಡಿಸಿ ಕಪ್ಪಡಿ ರಾಚಪ್ಪಾಜಿ ಗದ್ದುಗೆಯ ಮುಂದೆ ಆಣೆ ಮಾಡುವುದಾಗಿ ಜಿ.ಪಂಮಾಜಿ ಸದಸ್ಯ ಸಾ.ರಾ.ನಂದೀಶ್ ಮತ್ತು ಜೆಡಿಎಸ್ ಮುಖಂಡ ಹೂಟಗಳ್ಳಿ ಸುರೇಶ್ ಜಿದ್ದಿಗೆ ಬಿದ್ದು ಕಪ್ಪಡಿಗೆ ಹೋಗಲು ಬಂದಾಗ ಕಪ್ಪಡಿ ಗದ್ದುಗೆಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳು ಹೋಬಳಿ ಕೇಂದ್ರದ ಸ್ವಾಗತ ಕಮಾನಿನ ಮುಂದೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು.

ಜಿ.ಪಂ.ಮಾಜಿ ಸದಸ್ಯ ಸಾ.ರಾ.ನಂದೀಶ್ ತಮ್ಮೊಂದಿಗೆ ಬಂದ ಸಾವಿರಾರು ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ಜತೆ ಕಪ್ಪಡಿಗೆ ತೆರಳಲು ಆಗಮಿಸಿದಾಗ ಮೈಸೂರಿನಿಂದ ಹತ್ತಾರು ಕಾರುಗಳ ಮೂಲಕ ಬಂದ ಹೂಟಗಳ್ಳಿಸುರೇಶ್ ಮತ್ತು ಬೆಂಬಲಿಗರು ಹೆಬ್ಬಾಳಿನ ಪ್ರಮುಖ ವೃತ್ತ ದಲ್ಲಿ ಪರಸ್ಪರ ಘರ್ಷಣೆ ಮತ್ತು ದೂಷಣೆಯಲ್ಲಿ ತೊಡಗಿಕೊಂಡರು.

ಜೆಡಿಎಸ್ ಪಕ್ಷದ ಎರಡು ಬಣದವರು ಕಪ್ಪಡಿಗೆ ಬಂದು ಆಣೆ ಪ್ರಮಾಣ ಮಾಡಲು ಬರುವ ವಿಚಾರ ತಿಳಿದಿದ್ದ ಕೆ.ಆರ್.ನಗರ ಪೊಲೀಸ್ ಠಾಣೆಯ ಎಸ್.ಶಿವಪ್ರಕಾಶ್, ಸಾಲಿಗ್ರಾಮ ಠಾಣೆಯ ಇನ್ಸ್ ಪೆಕ್ಟರ್ ಶಶಿಕುಮಾರ್ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಸ್ಥಿತಿಯನ್ನು ತಹ ಬದಿಗೆ ತರಲು ಹರಸಾಹಸ ಪಟ್ಟರು.
ಈ ಸಂದರ್ಭದಲ್ಲಿ ಕಪ್ಪಡಿಗೆ ಆಣೆ ಪ್ರಮಾಣ ಮಾಡಲು ಆಗಮಿಸಿದ್ದ ಜೆಡಿಎಸ್ ಪಕ್ಷದ ಎರಡು ತಂಡದವರನ್ನು ತಡೆದ ಹೆಬ್ಬಾಳು ಗ್ರಾಮದ ಪ್ರಮುಖರು ಶತಮಾನಗಳಿಂದ ನಿಷ್ಠೆಗೆ ಹೆಸರಾಗಿರುವ ಕಪ್ಪಡಿ ರಾಜಪ್ಪಾಜಿಯವರ ಗದ್ದುಗೆಯನ್ನು ರಾಜಕೀಯ ಕಾರಣಕ್ಕೆ‌ ಬಳಸಿಕೊಳ್ಳಬಾರದು ಎಂದು ಕಟ್ಟಪ್ಪಣೆ ಮಾಡಿದರಲ್ಲದೆ ಪೊಲೀಸ್ ಸಹಕಾರದೊಂದಿಗೆ ಕಪ್ಪಡಿಗೆ ಹೋಗುವ ಮಾರ್ಗವನ್ನು ಬಂದ್ ಮಾಡಿದರು.

ಆಣೆ ಮಾಡಲು ಬಂದಿದ್ದ ಸಾ.ರಾ.ನಂದೀಶ್ ಮತ್ತವರ ಬೆಂಬಲಿಗರು ಮತ್ತು ಹೂಟಗಳ್ಳಿ ಸುರೇಶ್ ಅವರ ಜೊತೆ ಬಂದಿದ್ದವರು ಮತ್ತು ಬೆಟ್ಟಿಂಗ್ ಗೆ ಸಾಕ್ಷಿಯಾಗಿದ್ದ ಕೆ.ಆರ್.ನಗರ ಎಪಿಎಂಸಿ ಕುಪ್ಪಳ್ಳಿಸೋಮು ಅವರ ನಡುವೆ ವಾದ‌ವಿವಾದ ಸಣ್ಣ ಘರ್ಷಣೆಗಳು ನಡೆದು ಸ್ವ ಪಕ್ಷದ ನಾಯಕರ ನಡುವೆಯೇ ಪರ ಮತ್ತು ವಿರೋಧಗಳು ಘೋಷಣೆ ಗಳು ಮೊಳಗಿಸಲ್ಪಟ್ಟವು.

ತಮ್ಮ ವಿರುದ್ದವಾಗಿ ಕೇಳಿ ಬಂದ ಪಕ್ಷ ನಿಷ್ಠೆಯ ದೂರುಗಳ ಬಗ್ಗೆ ಆಣೆ ಮತ್ತು ಪ್ರಮಾಣ ಮಾಡಲು ಕಪ್ಪಡಿ ಕ್ಷೇತ್ರಕ್ಕೆ ತೆರಳುವಾಗ ಪೊಲೀಸರು ಮತ್ತು ಗ್ರಾಮಸ್ಥರು ಏರಿದ್ದ ನಿರ್ಬಂಧ ವನ್ನು ಅರಿತ‌ ಜೆಡಿಎಸ್ ಮುಖಂಡ ಹೂಟಗಳ್ಳಿ ಸುರೇಶ್ ರಾಜಕೀಯ ಜಾಣ್ಮೆ ಮೆರೆದ ಸುರೇಶ್ ಪರ್ಯಾಯ ಮಾರ್ಗದಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಅವರ ಜೊತೆ ತೆರಳಿ ಸ್ವಯಂ ಪ್ರಮಾಣ ಮಾಡಿಕೊಂಡರು.

ಈ ವಿಚಾರ ಅರಿತ ಸಾ.ರಾ.ನಂದೀಶ್ ಮತ್ತು ಬೆಂಬಲಿಗರು ಪೊಲೀಸರನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಮಾಧ್ಯಮಗಳ ಮುಂದೆ ಬೆಟ್ಟಿಂಗ್ ಹಣವನ್ನು ರವಾನಿಸಿರುವ ವಿಚಾರವನ್ನು ಬಹಿರಂಗ ಪಡಿಸಿ ಕಾನೂನು ವಿರೋಧಿ ಚಟುವಟಿಕೆಯನ್ನು ನಡೆಸಿರುವ ಕುಪ್ಪಳ್ಳಿಸೋಮು ಮೇಲೆ ಸುಮೋಟೋ ಕೇಸ್ ದಾಖಲಿಸುವಂತೆ ಆಗ್ರಹಿಸಿದರು.

ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ನಂದೀಶ್ ನನ್ನ ವಿರುದ್ದ ಸಲ್ಲದ ಆರೋಪ‌ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಹೂಟಗಳ್ಳಿ ಸುರೇಶ್, ಕುಪ್ಪಳಿಸೋಮು ಅವರ ಪಾಟಲಂ ವಿರುದ್ದ ಕಾನೂನು ಹೋರಾಟ ಮಾಡುವ‌ ಎಚ್ಚರಿಕೆ ನೀಡಿದರಲ್ಲದೆ ಮುಂಬರುವ ಚುನಾವಣೆಯಲ್ಲಿ ಮಾಜಿ ಸಚಿವ‌ ಸಾ.ರಾ.ಮಹೇಶ್ ಜಯಶಾಲಿಯಾಗಿ ರಾಜ್ಯ ಮಟ್ಟದ ನಾಯಕರಾಗುವುದರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗುವುದನ್ನು ತಪ್ಪಿಸಲು ಈ ಷಡ್ಯಂತ್ರವನ್ನು ಕೆಲವು ಪಕ್ಷ ವಿರೋಧಿಗಳು ನಡೆಸಿದ್ದಾರೆ ಎಂದು ದೂರಿದರು.

RELATED ARTICLES
- Advertisment -
Google search engine

Most Popular