ಮೈಸೂರು: ಜೂ.೮ ಮತ್ತು ೯ರಂದು ನಗರದ ರಾಮಕೃಷ್ಣ ನಗರದ ರಮಾಗೋವಿಂದ ರಂಗ ಮಂದಿರದಲ್ಲಿ ಬ್ರಹ್ಮವಿದ್ಯಾ ಸಂಸ್ಥೆ ವತಿಯಿಂದ ಭಾರತೀಯ ಸಂಗೀತ ಶಾಸ್ತ್ರ ದಿನಾಚರಣೆ ಮತ್ತು ಸಂಗೀತ ಕಚೇರಿ ಒಳಗೊಂಡ ಎರಡು ದಿವಸಗಳ ಕಲೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾ.ಸಾ.ನಂದಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವೇಳೆ ರಾಜ್ಯ ಸಂಗೀತವಿದ್ವಾನ್ ಡಾ.ವಿಶ್ವೇಶ್ವರನ್ ಅವರ ಶ್ರೀಕಮಲಾಂಬಾ ಜಯತಿ (ವ್ಯಾಖ್ಯಾನ ಮತ್ತು ಸರಲಿಪಿ) ಮತ್ತು ಸಂಗೀತ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಆರೋಹಿಣಿ ಎಂಬ ಸಂಗೀತನಾಟ್ಯ ಲೇಖನ ಸಂಕಲನ ಬಿಡುಗಡೆಗೊಳ್ಳಲಿದೆ. ಜೂ.೮ರಂದು ಸಂಜೆ ೫.೩೦ಕ್ಕೆ ಕಾರ್ಯಕ್ರಮವನ್ನು ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸುವರು. ಡಾ.ರಾ.ವಿಶ್ವೇಶ್ವರನ್ ಅಧ್ಯಕ್ಷತೆ ವಹಿಸುವರು. ಈ ವೇಳೆ ಸಾಹಿತ್ಯ ಸೂರೀ ಪ್ರಶಸ್ತಿಯನ್ನು ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಶಾಸ್ತ್ರ ಸೂರೀ ಪ್ರಶಸ್ತಿಯನ್ನು ಡಾ.ಜಿಯಾನ್ ಜುಸೆಫ್ ಫಿಲಿಪಿ, ರಾ.ಸತ್ಯನಾರಾಯಣ ಪ್ರಶಸ್ತಿಯನ್ನು ಎಚ್.ಕೆ.ನರಸಿಂಹಮೂರ್ತಿ, ಮಧುಕರಂ ಪ್ರಶಾಂತ್ ಅಯ್ಯಂಗಾರ್, ಶೃಂಗೇರಿ ಎಚ್.ಎಸ್.ನಾಗರಾಜ್ ಅವರಿಗೆ ಪ್ರದಾನ ಮಾಡಲಾಗುವುದು. ಬಳಿಕ ವೀಣಾವಾದನ ಕಛೇರಿ ನಡೆಯಲಿದೆ ಎಂದರು.
ಜೂ.೯ರಂದು ಸಂಜೆ ೬ ಗಂಟೆಗೆ ಮಧುಕರಂ ಪ್ರಶಾಂತ್ ಅಯ್ಯಂಗಾರ್ ಅವರಿಂದ ಗಾಯನ ಕಛೇರಿ, ನಂತರ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್ ಅವರಿಂದ ಗಾಯನ ಕಛೇರಿ, ಕಮಲಾಂಬಾ ಜಯತಿ, ಡಾ.ರಾ. ವಿಶ್ವೇಶ್ವರನ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಶ್ರೀಹರ್ಷ, ಡಾ.ಎಸ್.ಕಾರ್ತಿಕ್, ಕೌಸ್ತುಭ ಹಾಜರಿದ್ದರು.