Saturday, April 19, 2025
Google search engine

Homeಸ್ಥಳೀಯಅರ್ಚಕರ ಸಮಸ್ಯೆ ಬಗೆಹರಿಸಲು ಹೋರಾಟ

ಅರ್ಚಕರ ಸಮಸ್ಯೆ ಬಗೆಹರಿಸಲು ಹೋರಾಟ

ಮೈಸೂರು: ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಪರಿಹಾರ ಕಲ್ಪಿಸುವಂತೆ ಆಗ್ರಹಿಸುವ ಉದ್ದೇಶದಿಂದ ದೊಡ್ಡ ಮಟ್ಟದ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದರು.
ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ನೌಕರರ ಸಂಘದಿಂದ ನಗರದ ದಿಗಂಬರ ಜೈನ ಬಸದಿಯಲ್ಲಿ ಬುಧವಾರ ಆಯೋಜಿಸಿದ್ದ ಪದಾಧಿಕಾರಿಗಳ ಮಹಾಸಭೆ ಮತ್ತು ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ದೇವರನ್ನು ಪೂಜಿಸುವ ಅವಕಾಶ ಸಿಗುವ ಅರ್ಚಕರಾಗುವುದು ಪೂರ್ವ ಜನ್ಮದ ಪುಣ್ಯ. ಆದರೆ, ಗ್ರಾಮೀಣ ಪ್ರದೇಶದ ಅರ್ಚಕರು ಬಹಳ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಮದುವೆ ಮಾಡಲು ಬಹಳ ತೊಂದರೆ ಎದುರಿಸುತ್ತಿದ್ದಾರೆ. ರಾಜ್ಯದ ೩೫ ಸಾವಿರ ದೇವಸ್ಥಾನಗಳು ಉಳಿಯಬೇಕಾದರೆ ಅರ್ಚಕರೇ ಕಾರಣ. ಅವರು ನಿತ್ಯವೂ ಬಂದು ಪೂಜೆ ಸಲ್ಲಿಸುತ್ತಿರುವುದರಿಂದ ದೇವಸ್ಥಾನಗಳು ಉಳಿದಿವೆ. ಇಲ್ಲದಿದ್ದರೆ ಒತ್ತುವರಿ ಆಗುತ್ತಿದ್ದವು ಎಂದು ತಿಳಿಸಿದರು.
ಗಮನ ಕೊಡುತ್ತಿಲ್ಲ: ಭೂಸುಧಾರಣಾ ಕಾಯ್ದೆಯ ಪರಿಣಾಮ ಅರ್ಚಕರು ಜಮೀನುಗಳನ್ನು ಕಳೆದುಕೊಂಡರು. ಆದರೆ, ಸರ್ಕಾರ ನಮ್ಮ ಕಡೆಗೆ ಗಮನ ಕೊಡುತ್ತಿಲ್ಲ. ಹಿಂದೂ ಧರ್ಮ, ಸಂಸ್ಕೃತಿ ಉಳಿದಿರುವುದಕ್ಕೆ ಅರ್ಚಕರೇ ಕಾರಣ. ಆದರೆ, ಅವರಿಗೆ ಯಾವುದೇ ವೇತನ ಅಥವಾ ಗೌರವ ಸಂಭಾವನೆ ಕೊಡುತ್ತಿಲ್ಲ. ಪೂಜಾ ಸಾಮಗ್ರಿಗೆ ಮಾತ್ರವೇ ಹಣ ನೀಡಲಾಗುತ್ತಿದೆ. ಹೀಗಾಗಿ ವೇತನ ಸೇರಿದಂತೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು. ಅರ್ಚಕರೆಲ್ಲರೂ ಒಂದೇ ಜಾತಿ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ನಮ್ಮನ್ನು ಹೀಯಾಳಿಸುವವರ ವಿರುದ್ಧ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.
ಸಂಘದ ಹೋರಾಟದ ಫಲವಾಗಿ ಅರ್ಚಕರಿಗೆ ವಿಮಾ ಸೌಲಭ್ಯ ದೊರೆತಿದೆ. ನಿಧನರಾದರೆ ೨ ಲಕ್ಷ ಪರಿಹಾರ, ತಿಂಗಳಿಗೆ ೧೦ ಸಾವಿರ ಗೌರವ ಸಂಭಾವನೆ ನೀಡುವಂತೆ ಕೋರಲಾಗಿದೆ. ತಸ್ತಿಕ್ ಅಥವಾ ನೇಮಕಾತಿ ಸಂದರ್ಭದಲ್ಲಿ ಯಾರಿಗೂ ಹಣ ಕೊಡಬಾರದು ಎಂದು ಕೋರಿದ ಅವರು, ಅರ್ಚಕರನ್ನು ೬೫ ವರ್ಷಕ್ಕೆ ನಿವೃತ್ತಿಗೊಳಿಸಬಾರದೆಂದು ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ತಿಳಿಸಿದರು.
ಜೈನ ಸಮಾಜದ ಮುಖಂಡ ಸುರೇಶ್ ಕುಮಾರ್ ಜೈನ್ ಮಾತನಾಡಿ, ಜೈನ ಸಮಾಜದ ಬಸದಿಗಳು ಹಾಗೂ ಅರ್ಚಕರ ಸ್ಥಿತಿ ಶೋಚನೀಯವಾಗಿದೆ. ಅರ್ಚಕರಿಗೆ ಪ್ರತಿ ತಿಂಗಳೂ ಹಣ ಬರುವಂತೆ ಮಾಡಬೇಕು. ಭಕ್ತರು ಹಣ ಠೇವಣಿ ಇಟ್ಟು ಅದು ನೇರವಾಗಿ ಅರ್ಚಕರಿಗೆ ಹೋಗುವಂತೆ ವ್ಯವಸ್ಥೆಯಾಗಬೇಕು ಎಂದು ಸಲಹೆ ನೀಡಿದರು.
ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಸತ್ಯನಾರಾಯಣ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಶ್ರೇಣಿಕ, ಸನ್ಮತಿ, ಸರ್ವೇಶ, ಕಿರಾಳು ಮಹೇಶ್, ಬಸದಿಯ ಟ್ರಸ್ಟಿ ಮಹೇಶ್ ಪ್ರಸಾದ್ ಇದ್ದರು ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular