ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶದಲ್ಲಿ ರೌಡಿಶೀಟರ್ ಮತ್ತು ಆತನ ಪಟಾಲಂ ನಡೆಸಿದ್ದ ಬಿಂದಾಸ್ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಬಂಡೀಪುರದ ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಡಿ. ಪುನೀತ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ‘ಹುಲಿ ಕಟ್ಟೆ’ ಎಂಬಲ್ಲಿರುವ ಕಳ್ಳಬೇಟೆ ತಡೆ ಶಿಬಿರದ ಮುಂಭಾಗದಲ್ಲೇ ಕುಖ್ಯಾತ ರೌಡಿಶೀಟರ್ ಸತೀಶ್ ಯಾನೆ ಮಹದೇವಪ್ರಸಾದ್ ಹಾಗೂ ಆತನ ಸ್ನೇಹಿತರಾದ ಗಂಗಾಧರ್ ಮತ್ತು ಚೇತನ್ ಅಕ್ರಮವಾಗಿ ಪ್ರವೇಶಿಸಿ ಮದ್ಯದ ಪಾರ್ಟಿ ಮಾಡಿದ್ದರು. ಶಿಬಿರದ ಸೌರ ಫಲಕವನ್ನೇ ಟೇಬಲ್ ಮಾಡಿಕೊಂಡು, ಅದರ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ ಹಾಗೂ ತಿಂಡಿಯ ಪ್ಯಾಕೆಟ್‌ಗಳನ್ನು ಇಟ್ಟು ಮೋಜು ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಅತ್ಯಂತ ಸಂರಕ್ಷಿತ ಹಾಗೂ ವನ್ಯಜೀವಿಗಳ ಓಡಾಟವಿರುವ ಪ್ರಮುಖ ವಲಯದೊಳಗೆ ಇಂತಹ ಕೃತ್ಯ ನಡೆದಿದ್ದಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಅಕ್ರಮ ಪಾರ್ಟಿಯ ಹಿಂದೆ ಸ್ಥಳೀಯ ಅರಣ್ಯ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಂದೀಶ್ ಅವರು ಎಸಿಎಫ್ ಸುರೇಶ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಎಸಿಎಫ್ ನೀಡಿದ ತನಿಖಾ ವರದಿಯಲ್ಲಿ, ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ಅವರು ತಮಗಿಂತ ಮೇಲಧಿಕಾರಿಗಳಿಗೆ ಈ ಗಂಭೀರ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿರುವುದು ಹಾಗೂ ಫೋಟೋಗಳಲ್ಲಿ ಗುರುತಿಸಲಾದ ಶಂಕಿತರ ಹೆಸರನ್ನು ಅಧಿಕೃತವಾಗಿ ದಾಖಲಿಸದೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಶಿಸ್ತು ಕ್ರಮಕ್ಕೆ ಬಾಕಿ ಇರುವಂತೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಸ್ತುತ ಅರಣ್ಯ ಇಲಾಖೆಯು ಈ ಮೂವರು ಕಿಡಿಗೇಡಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿದೆ. ಸದ್ಯ ತಲೆಮರೆಸಿಕೊಂಡಿರುವ ರೌಡಿಶೀಟರ್ ಸತೀಶ್ ಮತ್ತು ಆತನ ಪಟಾಲಂಗಾಗಿ ಅರಣ್ಯ ಇಲಾಖೆ ಹಾಗೂ ಗುಂಡ್ಲುಪೇಟೆ ಪೊಲೀಸರು ಜಂಟಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಸಾಮಾನ್ಯ ಜನರಿಗೆ ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯಲೂ ದಂಡ ವಿಧಿಸುವ ಇಲಾಖೆ, ರೌಡಿಶೀಟರ್‌ಗಳಿಗೆ ಪಾರ್ಟಿ ಮಾಡಲು ಬಿಟ್ಟಿದ್ದಕ್ಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದರು.



