Sunday, April 20, 2025
Google search engine

Homeಸ್ಥಳೀಯತಿಂಗಳಾಂತ್ಯಕ್ಕೆ ಬೀದಿ ನಾಯಿ ಆರೈಕೆ ಕೇಂದ್ರ ಉದ್ಘಾಟನೆ

ತಿಂಗಳಾಂತ್ಯಕ್ಕೆ ಬೀದಿ ನಾಯಿ ಆರೈಕೆ ಕೇಂದ್ರ ಉದ್ಘಾಟನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳು, ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸುವ ಜತೆಗೆ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಲು ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಬೀದಿ-ಸಾಕು ನಾಯಿಗಳ ಆರೈಕೆ ಕೇಂದ್ರದ ಕಟ್ಟಡ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ತಿಂಗಳಾಂತ್ಯಕ್ಕೆ ಸೇವೆಗೆ ಚಾಲನೆ ನೀಡಲಾಗುತ್ತದೆ.

ಸಾಮಾನ್ಯ ಆಸ್ಪತ್ರೆ ಮಾದರಿಯಲ್ಲೇ ಬೀದಿನಾಯಿಗಳ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯವುಳ್ಳ ಆರೈಕೆ ಕೇಂದ್ರವಾಗಿದ್ದು, ಕಾಮಗಾರಿ ಪೂರ್ಣವಾದ ಮೇಲೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಸೆಪ್ಟಂಬರ್ ನಂತರ ನಗರದಲ್ಲಿ ಇರುವ ಬೀದಿ ನಾಯಿಗಳ ಕಾರ್ಯಾಚರಣೆ ಮಾಡಿ ಈ ಕೇಂದ್ರಕ್ಕೆ ತಂದು ಆರೈಕೆ, ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಮತ್ತೆ ಅದೇ ಜಾಗಕ್ಕೆ ಬಿಡುವ ಕೆಲಸ ಮಾಡುವ ಕೆಲಸ ಆರಂಭವಾಗಲಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿರುವ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ವಿಷಯ ಪ್ರಸ್ತಾಪಿಸಿದ್ದಲ್ಲದೆ, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದರು. ಇದಲ್ಲದೆ, ಆರೈಕೆ ಕೇಂದ್ರವನ್ನು ತಕ್ಷಣವೇ ಸೇವೆಗೆ ಸಜ್ಜುಗೊಳಿಸುವಂತೆ ಒತ್ತಡ ಹೇರಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದರು. ಇದರಿಂದಾಗಿ, ಗುರುವಾರ ಮೇಯರ್ ಶಿವಕುಮಾರ್ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ರಾಯನಕೆರೆ ಬಳಿ ನಿರ್ಮಿಸುತ್ತಿರುವ ಬೀದಿನಾಯಿಗಳ ಹಾಗೂ ಸಾಕು ನಾಯಿಗಳ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

೨.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ರಾಯನಕರೆ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಬಳಿ ಎರಡೂವರೆ ಎಕರೆ ಪ್ರದೇಶದಲ್ಲಿ ೨.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆರೈಕೆ ಕೇಂದ್ರ ಸಂಪೂರ್ಣ ಆಸ್ಪತ್ರೆಯ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ನಾಯಿಗಳಿಗೆ ಕಿಚನ್ ರೂಮ್, ಒಪಿಡಿ, ಲ್ಯಾಬೋರೇಟರಿ, ಶಸ್ತ್ರಚಿಕಿತ್ಸಾ ಕೊಠಡಿ, ಮೆಡಿಸಿನ್ ಕೊಠಡಿ, ನಾಯಿ ಮರಿಗಳ ಆರೈಕೆ ಕೊಠಡಿ, ರೋಗ ಬಂದ ನಾಯಿಗಳ ಐಸೋಲೇಷನ್ ಸೆಂಟರ್, ವೈದ್ಯರ ಕೊಠಡಿ, ವಿಶ್ರಾಂತಿ ಕೊಠಡಿ, ಸಿಬ್ಬಂದಿ ಕೊಠಡಿ, ಸಾಕು ಮರಿಗಳ ಆರೈಕೆ ಕೇಂದ್ರದ ಕೊಠಡಿ ನಿರ್ಮಿಸಲಾಗಿದೆ. ರೇಬಿಸ್ ಬಂದ ನಾಯಿಗಳು, ತೀವ್ರತರದ ನಾಯಿಗಳನ್ನು ಪ್ರತ್ಯೇಕವಾಗಿ ಇಡಲು ಸೆಲ್ ಮಾದರಿಯ ಕೊಠಡಿ ನಿರ್ಮಿಸಿದ್ದು, ರೇಬಿಸ್ ನಾಯಿಗಳು ಇರುವ ಕಡೆಗೆ ಯಾರು ಪ್ರವೇಶ ಮಾಡದಂತೆ ದೂರದಲ್ಲಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಕೇಂದ್ರದಲ್ಲಿ ಸಂಪೂರ್ಣವಾಗಿ ನಾಯಿಗಳನ್ನು ಇಟ್ಟುಕೊಂಡು ಸಾಕುವುದಿಲ್ಲ. ಬೀದಿ ನಾಯಿಗಳನ್ನು ಹಿಡಿದು ತಂದು ಸಂತಾನಹರಣ ಚಿಕಿತ್ಸೆ ಮಾಡಿ ವಾಪಸ್ ಬಿಡಲಾಗುತ್ತದೆ. ರೋಗಪೀಡಿತ ನಾಯಿಗಳಿಗೆ ಎರಡು-ಮೂರು ದಿನಗಳ ಕಾಲ ಚಿಕಿತ್ಸೆ ನೀಡಿ ಗುಣವಾದ ಬಳಿಕ ವಾಪಸ್ ಅದೇ ಜಾಗಕ್ಕೆ ತಂದು ಬಿಡಲಾಗುತ್ತದೆ. ಇಲ್ಲಿ ಚಿಕಿತ್ಸೆ-ಆರೈಕೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಆರೋಗ್ಯಾಧಿಕಾರಿ ಡಾ.ನಾಗರಾಜು ಹೇಳಿದರು.

೩ ಎಕರೆಯಲ್ಲಿ ಹಂದಿ ಸಾಕಾಣಿಕಾ ಕೇಂದ್ರ: ಹಂದಿಗಳನ್ನು ಸಾಕುವವರು ಪ್ರತ್ಯೇಕವಾಗಿ ಜಾಗ ಇಲ್ಲದೆ ಬೀದಿಯಲ್ಲಿ ಬಿಡುತ್ತಿರುವ ಕಾರಣ ಅಂತವುಗಳನ್ನು ಹಿಡಿದುಕೊಂಡು ಬಂದು ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಬಿಟ್ಟು ಸಾಕಲಾಗುತ್ತದೆ. ಪಾಲಿಕೆಯಿಂದಲೇ ಅದನ್ನು ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. ೨.೩೭ ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಈ ಕೇಂದ್ರಕ್ಕೆ ೧ ಕೋಟಿ ರೂ.ಖಚಾಗಿದ್ದು, ಉಳಿದ ಕಾಮಗಾರಿ ಪೂರ್ಣಕ್ಕೆ ಹೆಚ್ಚುವರಿ ಒಂದು ಕೋಟಿ ರೂ.ಪ್ರಸ್ತಾಪಿಸಲಾಗಿದೆ. ಹೀಗಾಗಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಉಪ ಮೇಯರ್ ಡಾ.ಜಿ.ರೂಪಾ, ಆಡಳಿತ ಪಕ್ಷದ ನಾಯಕ ಮ.ವಿ.ರಾಮಪ್ರಸಾದ್, ಸದಸ್ಯರಾದ ಬಿ.ವಿ.ಮಂಜುನಾಥ್, ಅಶ್ವಿನಿ ಅನಂತು, ಸಾತ್ವಿಕ್, ಕೆ.ವಿ.ಶ್ರೀಧರ್, ಎಸ್‌ಬಿಎಂ ಮಂಜು, ಸವಿತಾ, ಅಧೀಕ್ಷಕ ಅಭಿಯಂತರರಾದ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತ ಸತ್ಯಮೂರ್ತಿ, ಜೆಇ ರಂಜಿತ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular