ಮಂಡ್ಯ: ಕೆ.ಆರ್.ಪೇಟೆ ಪಟ್ಟಣದಲ್ಲಿ ಫ್ಲೆಕ್ಸ್ ವಾರ್ ಶುರುವಾಗಿದ್ದು, ಜೆಡಿಎಸ್ ಶಾಸಕರಿಂದ ಬಸ್ ನಿಲ್ದಾಣದಲ್ಲಿದ್ದ ಮಾಜಿ ಸಚಿವ ನಾರಾಯಣಗೌಡರ ಭಾವಚಿತ್ರ ತೆರವು ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ನಾರಾಯಣ ಗೌಡರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣ ಗೌಡರು ಸಚಿವರಾಗಿದ್ದ ವೇಳೆ ಶಾಸಕರ ಅನುದಾನದಲ್ಲಿ ಕೆ.ಆರ್.ಪೇಟೆ ಪಟ್ಟಣದ ಐ.ಬಿ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದರು. ಅಲ್ಲಿ ನಾರಾಯಣಗೌಡರ ಭಾವಚಿತ್ರ ಹಾಕಲಾಗಿತ್ತು.
ಈ ಬಾರಿ ನಾರಾಯಣಗೌಡರು ಸೋತಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಟಿ ಮಂಜು ಗೆದ್ದು ಶಾಸಕರಾಗಿದ್ದಾರೆ. ಶಾಸಕರಾಗುತ್ತಿದ್ದಂತೆ ನಿಲ್ದಾಣದಲ್ಲಿ ಇದ್ದ ನಾರಾಯಣಗೌಡರ ಭಾವಚಿತ್ರ ತೆರವು ಮಾಡಿ, ಆ ಜಾಗದಲ್ಲಿ ತಮ್ಮ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರ ಅಳವಡಿಸಿದ್ದಾರೆ.
ಜೆಡಿಎಸ್ ಶಾಸಕರ ಈ ನಡೆಗೆ ಬಿಜೆಪಿ ಕಾರ್ಯಕರ್ತರು ಮತ್ತು ನಾರಾಯಣಗೌಡರ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ದ್ವೇಷದ ರಾಜಕಾರಣ ಮಾಡಲು ಮುಂದಾದ್ರೆ ಶಾಸಕರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.