ನವದೆಹಲಿ : ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಭಾರತ ತಂಡವು ಭಾನುವಾರ ತನ್ನ ಮೊದಲ ಜಯ ದಾಖಲಿಸಿದೆ. ಟೀಮ್ ಇಂಡಿಯಾ ಪಾಕಿಸ್ತಾನವನ್ನು 64 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕ್ ತಂಡದ ವಿರುದ್ಧ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೆಲುವಾಗಿದೆ. ಇದೇ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೀಪ್ತಿ ಶರ್ಮಾ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಸಿದುಕೊಂಡರು. ಇದರೊಂದಿಗೆ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಷಯದಲ್ಲಿ ಅವರು ವಿಶ್ವದ ಎಲ್ಲಾ ದಿಗ್ಗಜರನ್ನು ಹಿಂದಿಕ್ಕಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಗುಲ್ ಫಿರೋಜಾ, ಆಯೆಷಾ ಜಾಫರ್, ಅಲಿಯಾ ರಿಯಾಜ್, ನಶ್ರಾ ಸಂಧು ಮತ್ತು ತಾಸ್ಮಿಯಾ ರುಬಾಬ್ ಅವರ ವಿಕೆಟ್ ಪಡೆದರು.
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧಕಿ
ದೀಪ್ತಿ ಶರ್ಮಾ ಅವರು ಥೈಲ್ಯಾಂಡ್‌ನ ಥಿಪಾಚಾ ಪುಟ್ಟಾವಾಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪುಟ್ಟಾವಾಂಗ್ ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 165 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಗೊಂಚಲು (ಪಂಜಾ) ಪಡೆದ ನಂತರ ದೀಪ್ತಿ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆ 166 ಕ್ಕೆ ತಲುಪಿದೆ.
ಟಿ20 ಯಲ್ಲಿ ದೀಪ್ತಿ ಅವರ ಪ್ರಾಬಲ್ಯ
ದೀಪ್ತಿ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಆಟಗಾರ್ತಿ ರಾಧಾ ಯಾದವ್ (103 ವಿಕೆಟ್).
ದೀಪ್ತಿ ಮತ್ತು ರಾಧಾ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಭಾರತೀಯ ಬೌಲರ್ ಟಿ20 ಯಲ್ಲಿ ಇದುವರೆಗೆ 100 ವಿಕೆಟ್‌ಗಳ ಗಡಿ ದಾಟಿಲ್ಲ.
ಈ ಪಟ್ಟಿಯಲ್ಲಿ ಇವರಿಬ್ಬರ ನಂತರದ ಸ್ಥಾನದಲ್ಲಿ ಪೂನಂ ಯಾದವ್ ಇದ್ದು, ಅವರ ಖಾತೆಯಲ್ಲಿ 98 ವಿಕೆಟ್‌ಗಳಿವೆ.
ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!
ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡು ಬಾರಿ 5 ವಿಕೆಟ್‌ಗಳ ಸಾಧನೆ (5-Wicket Hall) ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ದೀಪ್ತಿ ಶರ್ಮಾ ಭಾಜನರಾಗಿದ್ದಾರೆ. ದೀಪ್ತಿಗಿಂತ ಮುನ್ನ ಜೂಲನ್ ಗೋಸ್ವಾಮಿ, ಪ್ರಿಯಾಂಕಾ ರಾಯ್ ಮತ್ತು ರೇಣುಕಾ ಸಿಂಗ್ ಟಿ20 ಯಲ್ಲಿ ಒಂದು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆದರೆ ಇದುವರೆಗೆ ಯಾವುದೇ ಭಾರತೀಯ ಬೌಲರ್ ಎರಡು ಬಾರಿ ಈ ಸಾಧನೆ ಮಾಡಿರಲಿಲ್ಲ. (ಏಜೆನ್ಸಿಸ್)



