Saturday, April 19, 2025
Google search engine

Homeರಾಜ್ಯಸುದ್ದಿಜಾಲಸಮರ್ಪಕ ಮಾಸಾಶನ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಸಮರ್ಪಕ ಮಾಸಾಶನ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಮದ್ದೂರು: ಕಳೆದ 6-7 ತಿಂಗಳಿನಿಂದ ಬಾಕಿ ಉಳಿದಿರುವ ಮಾಸಾಶನವನ್ನು ನೀಡುವಂತೆ ಹಾಗೂ ಸಮರ್ಪಕ ಮಾಸಾಶನ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಬೆಸಗರಹಳ್ಳಿ ವಲಯ ಸಮಿತಿ ವತಿಯಿಂದ ಬೆಸಗರಹಳ್ಳಿ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಪಿ. ಅರುಣ್ ಕುಮಾರ್ ಅವರು ಮಾತನಾಡಿ, ಬೆಸಗರಹಳ್ಳಿ ನಾಡಕಚೇರಿ ವ್ಯಾಪ್ತಿಯ ಸಾವಿರಾರು ವೃದ್ಧರು, ಅಂಗವಿಕಲರು, ವಿಧವೆಯರು ಹಾಗೂ ಅಸಕ್ತರಿಗೆ ಕಳೆದ 6-7 ತಿಂಗಳಿಂದ ಮಾಸಾಸನ ಬಾರದೆ ಬದುಕು ನಡೆಸುವುದೇ ದುಸ್ಥರವಾಗಿದೆ.

ಮಾತ್ರೆ, ಔಷದಿ, ದಿನಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಾಸಾಶನವನ್ನೇ ನಂಬಿ ಕುಳಿತವರ ಸ್ಥಿತಿ ಹೈರಾಣಾಗಿದೆ. ಇತ್ತ ಮಾತ್ರೆಗೂ ಕಾಸಿಲ್ಲ, ಅತ್ತಾ ತರಕಾರಿ ಸೊಪ್ಪಿಗೂ ಕಾಸಿಲ್ಲದಂತೆ, ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾತ್ರೆಗೆ ಅವರಿವರಲ್ಲಿ ಕಾಸು ಕೇಳಿಕೊಂಡು ಅಯೋಮಯವಾದ ಜೀವನ ನಡೆಸುತ್ತಿದ್ದಾರೆ ಆದ್ದರಿಂದ ತಕ್ಷಣ ಮಾಸಶನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಸಗರಹಳ್ಳಿ ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ಆಸಕ್ತರು, ವೃದ್ಧರು, ವಿಧವೆಯರು, ವಿಕಲಚೇತನರು ತಮ್ಮ ಬ್ಯಾಂಕಿನ ಪಾಸ್ ಬುಕ್ ಹಿಡಿದುಕೊಂಡು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು ಪೆನ್ಷನ್ ಬಾರದೆ ನಿರಾಸೆಯಿಂದ ಹಿಂತಿರುಗುವಂತಾಗಿದೆ. ಪೆನ್ಷನ್ ಗಾಗಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್, ತಹಶೀಲ್ದಾರ್ ಕಚೇರಿಗಳಿಗೆ ಅರ್ಜಿ ಹಿಡಿದು ಅಲೆದಾಡಿ ಸಾಕಾಗಿ ಬಡವರ ಚಪ್ಪಲಿ ಸವೆದು ಹೋಗಿವೆ. ಸರ್ಕಾರಿ ಸಂಬಳ ಪಡೆಯುವ ಸಾರ್ವಜನಿಕರ ಸೇವಕರಾದ ಅಧಿಕಾರಿಗಳಿಗೆ ಒಂದು ತಿಂಗಳು ಸಂಬಳ ತಡವಾದರೆ ತಡವರಿಸಿ ಬಿಡುತ್ತಾರೆ. ಸಾವಿರಾರು ರೂಪಾಯಿ ಸಂಬಳ ತೆಗೆದುಕೊಳ್ಳುವ ಇವರಿಗೆ ಈಗಾದರೆ 600, 800, 1200, 1400, 2000 ರೂಪಾಯಿಗಳ ಮಾಸಶನ ಪಡೆಯುವವರ ಗತಿ ಏನು.? ಎಂದಾದರೂ ಬಡವರ ಬಗ್ಗೆ ಯೋಚನೆ ಮಾಡಿದ್ದಾರೆಯೇ? ಬಡವರ ಬದುಕಿನ ಅರಿವಿದೆಯೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರಮಣ ಮಹರ್ಷಿ ಅಂಧರ ಪರಿಷತ್ ನ ಸಂಯೋಜಕಿ ಜಯಂತಿ ಹಿರೇಮಠ್ ಅವರು ಮಾತನಾಡಿ, ಮಾಸಾಶನ ನಂಬಿ ಬದುಕಿರುತ್ತಿರುವ ಅಂಗವಿಕಲರ ಬದುಕು ಮೂರಾಬಟ್ಟೆಯಾಗಿದೆ. ತಕ್ಷಣ ಮಾಸಾಶನ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಅಂಗವಿಕಲರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದರು.

ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಎ. ಮಧುಕುಮಾರ ಅವರು ಮಾತನಾಡಿ, ಹಾಲಿನ ಬೇಲೆ ಗಗನಕ್ಕೇರಿದೆ, ಅಡುಗೆ ಎಣ್ಣೆಯ ಬೆಲೆಯನ್ನು ಕೇಳಲು ಸಾಧ್ಯವಿಲ್ಲ. ಮೆಡಿಕಲ್ ಸ್ಟೋರ್ ನಲ್ಲಿ ಒಂದು ರೂಪಾಯಿ ಕಡಿಮೆಯಾದರೂ ಮಾತ್ರೆ ಕೊಡುವುದಿಲ್ಲ. ಸಿಲೆಂಡರ್ ಬೆಲೆ ಕೇಳುವವರು ದಿಕ್ಕಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಬಡವರು ಬದುಕುವುದು ಹೇಗೆ?. ತಕ್ಷಣ ಆರು ಏಳು ತಿಂಗಳಿಂದ ಬಾಕಿ ಇರುವ ಪೆನ್ಸನ್ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಬಡವರ ವಿರೋಧಿ ಧೋರಣೆಯನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪೆನ್ಸನ್ ಕಾಲಕಾಲಕ್ಕೆ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಮೇಲುಸ್ತುವಾರಿ ಮಾಡಬೇಕು. ವೃದ್ಧರು, ಅಂಗವಿಕಲರು, ವಿಧವೆಯರು ಹಾಗೂ ಅಸಕ್ತರು ನಾಡಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ ಬಂದಾಗ ಅವರನ್ನು ಕೂರಿಸಿ ಗೌರವದಿಂದ ನಡೆಸಿಕೊಂಡು ಅವರ ಕೆಲಸ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್ ಅವರು ಮಾತನಾಡಿ, ಮೂರು ನಾಲ್ಕು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಸರ್ಕಾರದ ಅನುದಾನದ ಕೊರತೆಯಿಂದ ಮಾಸಾಶನ ವಿಳಂಬವಾಗಿದೆ. ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.

ಕೂಲಿಕಾರರ ಸಂಘದ ಮುಖಂಡರಾದ ಕೀಳಘಟ್ಟ ಶಾಂತಮ್ಮ, ರಾಜು, ಮಧುಕುಮಾರ, ಚಿಕ್ಕತಾಯಮ್ಮ, ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ವೆಂಕಟೇಶ್, ಶಿವಲಿಂಗಯ್ಯ, ಪ್ರಭುಲಿಂಗ, ಮುಖಂಡರಾದ ಜಯರಾಮು, ದುಂಡಮ್ಮ, ಜಯಮ್ಮ, ಚಂದ್ರಮ್ಮ, ಹೇಮಾವತಿ, ಕೋಣಸಾಲೆ ಅನಂತ, ರಮ್ಯ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular