ಮಂಡ್ಯ: ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಎದುರು ಪ್ರತಿಭಟಿಸಿದರು.
ರೈತ ಸಂಘದ ಆಶ್ರಯದಲ್ಲಿ ರೈತರು ಪ್ರತಿಭಟನೆ ನಡೆಸಿ ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ಚೆಸ್ಕಾಂ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ ಏಳು ತಾಸು ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು, ಪಂಪ್ ಸೆಟ್ ಬಳಕೆದಾರರ ಆಧಾರ್ ಜೋಡಣೆ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ 40 ಗ್ರಾಮಗಳಲ್ಲಿ ಹಳೆ ಬಾಕಿಯನ್ನು ವಿದ್ಯುತ್ ಶುಲ್ಕಕ್ಕೆ ಸೇರಿಸಿ ಮನ್ನಾ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಸ್ಲಾಬ್ ಪದ್ಧತಿಯನ್ನ ವಾಪಸ್ ಪಡೆಯಬೇಕು,ಬಾಕಿ ಮೊತ್ತ ಇರುವ ಬಳಕೆದಾರರ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ,ವಿನೋದ್ ಬಾಬು, ಪುಟ್ಟಸ್ವಾಮಿ,ದಯಾನಂದ, ವರದರಾಜು ರಾಮಕೃಷ್ಣ ನೇತೃತ್ವ ವಹಿಸಿದ್ದರು.