ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೇವಾ ತೀರ್ಥದಲ್ಲಿ ‘ಪ್ರಗತಿ’ (PRAGATI) ಯೋಜನೆಯ 52ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದು ಸಕ್ರಿಯ ಆಡಳಿತವನ್ನು ಉತ್ತೇಜಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಸಮನ್ವಯದ ಮೂಲಕ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ರೂಪಿಸಲಾದ ಐಸಿಟಿ (ICT) ಆಧಾರಿತ ಮಲ್ಟಿ-ಮಾಡೆಲ್ ಪ್ಲಾಟ್‌ಫಾರ್ಮ್ ಆಗಿದೆ.
ಸೇವಾ ತೀರ್ಥದಲ್ಲಿ ನಡೆದ ಸಭೆಯಲ್ಲಿ ಪ್ರಧಾನಮಂತ್ರಿಯವರು ರಸ್ತೆ, ವಿದ್ಯುತ್, ಕೈಗಾರಿಕಾ ಕಾರಿಡಾರ್ ಮತ್ತು ಮೆಟ್ರೋ ರೈಲು ವಲಯಗಳಿಗೆ ಸಂಬಂಧಿಸಿದ ನಾಲ್ಕು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ ನಡೆಸಿದರು. ನಾಲ್ಕು ರಾಜ್ಯಗಳಲ್ಲಿ ಹರಡಿರುವ ಮತ್ತು ಸುಮಾರು 30,000 ಕೋಟಿ ರೂಪಾಯಿಗಳ ಹೂಡಿಕೆಯ ಈ ಯೋಜನೆಗಳನ್ನು ಅವುಗಳ ಸಮಯದ ಮಿತಿ, ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯ, ಸಮಸ್ಯೆಗಳ ಪರಿಹಾರ ಮತ್ತು ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸುವುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಯಿತು.
ಕಾಮಗಾರಿಯನ್ನು ದಕ್ಷತೆಯಿಂದ ಪೂರ್ಣಗೊಳಿಸುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಮೂಲಸೌಕರ್ಯ ಯೋಜನೆಗಳಲ್ಲಿನ ವಿಳಂಬವು ವೆಚ್ಚವನ್ನು ಹೆಚ್ಚಿಸುವುದಲ್ಲದೆ, ನಾಗರಿಕರು ಮತ್ತು ಕೈಗಾರಿಕೆಗಳಿಗೆ ಸಿಗಬೇಕಾದ ಸಂಭಾವ್ಯ ಪ್ರಯೋಜನಗಳನ್ನು ವಂಚಿಸುತ್ತದೆ” ಎಂದು ಹೇಳಿದರು. ಬಾಕಿ ಉಳಿದಿರುವ ಸಮಸ್ಯೆಗಳನ್ನು ಮಿಷನ್ ಮೋಡ್‌ನಲ್ಲಿ ಪರಿಹರಿಸಲು ಮತ್ತು ಉನ್ನತ ಮಟ್ಟದಲ್ಲಿ ಯೋಜನೆಗಳ ಸೂಕ್ಷ್ಮ ಉಸ್ತುವಾರಿಯನ್ನು ಖಚಿತಪಡಿಸಿಕೊಳ್ಳಲು ಅವರು ಸಂಬಂಧಪಟ್ಟ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದರು.
ಯೋಜನೆಗಳನ್ನು ಉತ್ತಮಗೊಳಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಲು ‘ಪಿಎಂ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್’ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಪ್ರಧಾನಿ ಮೋದಿ ಒತ್ತಿ ಹೇಳಿದರು. ಪೋರ್ಟಲ್‌ನಲ್ಲಿ ಯುಟಿಲಿಟಿಗಳು, ಮೂಲಸೌಕರ್ಯ ಲೇಯರ್‌ಗಳು, ಅನುಮೋದನೆಗಳು ಮತ್ತು ಫೀಲ್ಡ್-ಲೆವೆಲ್ ಡೇಟಾ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಮಾಹಿತಿಗಳನ್ನು ನಿಯಮಿತವಾಗಿ ನವೀಕರಿಸಲು (ಅಪ್‌ಡೇಟ್ ಮಾಡಲು) ಅವರು ತಿಳಿಸಿದರು. ಅವರ ಪ್ರಕಾರ, ನಿಖರವಾದ ಮತ್ತು ರಿಯಲ್-ಟೈಮ್ ಮಾಹಿತಿಯನ್ನು ಹೊಂದುವುದರಿಂದ ಅಡೆತಡೆಗಳನ್ನು ಮೊದಲೇ ಗುರುತಿಸಲು, ಏಜೆನ್ಸಿಗಳ ನಡುವಿನ ಸಮನ್ವಯವನ್ನು ಸುಧಾರಿಸಲು ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿಯವರು ‘ಟಿಬಿ ಮುಕ್ತ ಭಾರತ ಅಭಿಯಾನ’ದ ಪ್ರಗತಿಯನ್ನೂ ಪರಿಶೀಲಿಸಿದರು ಮತ್ತು ಈ ಅಭಿಯಾನವನ್ನು ಬಲಪಡಿಸಲು ಕೃತಕ ಬುದ್ಧಿಮತ್ತೆ (AI) ಯಂತಹ ಹೊಸ ತಂತ್ರಜ್ಞಾನಗಳನ್ನು ಬಳಸುವ ಅಗತ್ಯವನ್ನು ಒತ್ತಿ ಹೇಳಿದರು. ಜಾಗೃತಿ ಮೂಡಿಸಲು, ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಈ ಉಪಕ್ರಮವನ್ನು ಬೆಂಬಲಿಸಲು ಸಮುದಾಯಗಳನ್ನು ಒಗ್ಗೂಡಿಸಲು ಎನ್‌ಸಿಸಿ (NCC) ಕೆಡೆಟ್‌ಗಳು ಮತ್ತು ‘MY Bharat’ ಸ್ವಯಂಸೇವಕರನ್ನು ತೊಡಗಿಸಿಕೊಳ್ಳಲು ಅವರು ಸಲಹೆ ನೀಡಿದರು.
ಇದಲ್ಲದೆ, ಪ್ರಧಾನಿ ಮೋದಿ ಅವರು ಸೈಬರ್ ಅಪರಾಧ ಮತ್ತು ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿದರು ಮತ್ತು ನಾಗರಿಕರನ್ನು ವಂಚಿಸಲು ಡಿಜಿಟಲ್ ವೇದಿಕೆಗಳ ದುರುಪಯೋಗ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಸಂಘಟಿತ, ಸೂಕ್ಷ್ಮ ಮತ್ತು ಸಮಯೋಚಿತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ಅಲ್ಲದೆ, ಸಹಾಯ ಪಡೆಯಲು ನಾಗರಿಕರು ಹಲವು ಇಲಾಖೆಗಳಿಗೆ ಅಲೆಯುವಂತಾಗಬಾರದು ಎಂದು ಒತ್ತಿ ಹೇಳಿದರು.
ಕಾನೂನು ಜಾರಿ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಡಿಜಿಟಲ್ ವೇದಿಕೆಗಳ ನಡುವೆ ಸ್ಪಷ್ಟ ಹೊಣೆಗಾರಿಕೆ, ತ್ವರಿತ ಪ್ರತಿಕ್ರಿಯೆ ಮತ್ತು ಬಲವಾದ ಸಮನ್ವಯದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಸೈಬರ್ ವಂಚನೆಗಳಿಂದ ನಾಗರಿಕರನ್ನು ರಕ್ಷಿಸಲು ವ್ಯಾಪಕ ಮಟ್ಟದಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಅವರು ಕರೆ ನೀಡಿದರು. (ಏಜೆನ್ಸಿಸ್)



