ಚಿತ್ರದುರ್ಗ: ವಾಂತಿಭೇದಿ ಭಯಪಡುವುದು ಬೇಡ. ಶುದ್ಧ ನೀರು, ಬಿಸಿಬಿಸಿಯಾದ ಆಹಾರ ಸೇವನೆ, ಪರಿಸರ ಸ್ವಚ್ಛತೆಯ ಬಗ್ಗೆ ಗಮನಹರಿಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊಸಹಟ್ಟಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಾಲ್ಕು ಜನರಿಗೆ ವಾಂತಿಭೇದಿ ಪ್ರಕರಣ ಕಂಡು ಬಂದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವರದಿ ಪಡೆದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ಹೊಸಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ವಾಂತಿಬೇದಿ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮ ಜರುಗಿಸಿತು.
ಗ್ರಾಮದ ವಾಲ್ಮೀಕಿ ಭವನದಲ್ಲಿ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮಸ್ಥರನ್ನು ಸೇರಿಸಿ ಪ್ರಕರಣದ ಘಟನೆಯ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ವಿವರಿಸಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಂತಹ ನಾಲ್ಕು ಜನರ ಗುಣಮುಖರಾಗಿದ್ದಾರೆ. ಮೂರು ಜನ ಮನೆಗೆ ಹಿಂತಿರುಗಿದ್ದಾರೆ. ಒಬ್ಬರು ಸುಧಾರಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸಾರ್ವಜನಿಕರು ಭಯಪಡುವುದು ಬೇಡ. ಬಿಸಿಬಿಸಿಯಾದ ತೆಳು ಮೆದು ಆಹಾರವನ್ನು ಸೇವಿಸಿ, ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ. ಬಯಲು ಮಲವಿಸರ್ಜನೆ ಮಾಡಬೇಡಿ. ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ವಾಂತಿಬೇದಿ ಲಕ್ಷಣವಿರುವವರು ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಿರಿ ಎಂದರು.
ಆಶಾ ಕಾರ್ಯಕರ್ತರಿಗೆ ಮನೆಮನೆ ಸಮೀಕ್ಷೆ ನಡೆಸಿ ಶುಚಿತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲು ಓ ಆರ್ ಎಸ್ ಪೊಟ್ಟಣಗಳನ್ನ ಬಳಸುವ ರೀತಿಯನ್ನು undefined ತಿಳಿಸಿಕೊಡಲು ಉಪ್ಪು ಸಕ್ಕರೆಯ ದ್ರಾವಣವನ್ನು ಮಾಡಿಕೊಳ್ಳುವ ಬಗೆಯನ್ನು ತಿಳಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಶ್ರೀಧರ್ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.