Sunday, June 28, 2026
Google search engine

Homeದೇಶಸೆಶೆಲ್ಸ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಧಾನಿ ಮೋದಿ ಪ್ರಕೃತಿ ಪ್ರೇಮ: ವಿಶ್ವದ ಅತ್ಯಂತ ಹಿರಿಯ ಆಮೆ ‘ಜೊನಾಥನ್’ಗೆ...

ಸೆಶೆಲ್ಸ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಧಾನಿ ಮೋದಿ ಪ್ರಕೃತಿ ಪ್ರೇಮ: ವಿಶ್ವದ ಅತ್ಯಂತ ಹಿರಿಯ ಆಮೆ ‘ಜೊನಾಥನ್’ಗೆ ಆಹಾರ ತಿನ್ನಿಸಿದ ಪ್ರಧಾನಿ

ನವದೆಹಲಿ : ಮೂರು ದಿನಗಳ ಪ್ರವಾಸಕ್ಕಾಗಿ ಶನಿವಾರ ಸೆಶೆಲ್ಸ್‌ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ತಮ್ಮ ಸೆಶೆಲ್ಸ್ ಪ್ರವಾಸದ ಆರಂಭದಲ್ಲಿ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ವಿಕ್ಟೋರಿಯಾದಲ್ಲಿರುವ ‘ಸೆಶೆಲ್ಸ್ ನ್ಯಾಷನಲ್ ಬೊಟಾನಿಕಲ್ ಗಾರ್ಡನ್’ಗೆ ಭೇಟಿ ನೀಡಿದರು.

ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಧಾನಿ ಮೋದಿ ಅವರು ಅತ್ಯಂತ ಉತ್ಸಾಹದಿಂದ ದೈತ್ಯ ಆಮೆಗಳಿಗೆ ಆಹಾರವನ್ನು ತಿನ್ನಿಸಿದರು. ಇವುಗಳಲ್ಲಿ 194 ವರ್ಷದ ‘ಜೊನಾಥನ್’ ಕೂಡ ಸೇರಿದ್ದು, ಇದನ್ನು ವಿಶ್ವದ ಅತ್ಯಂತ ಹಿರಿಯ ಜೀವಂತ ಭೂಚರ ಪ್ರಾಣಿ ಎಂದು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಹರ್ಮಿನಿ ಅವರು ಗಾರ್ಡನ್‌ನಲ್ಲಿ ಸಸಿಯೊಂದನ್ನು ನೆಟ್ಟರು. ಬಳಿಕ ಅಲ್ಲಿನ ಸಿಬ್ಬಂದಿಯನ್ನು ಭೇಟಿ ಮಾಡಿದರು. ಸಿಬ್ಬಂದಿ ಅವರಿಗೆ ಬೊಟಾನಿಕಲ್ ಗಾರ್ಡನ್‌ನ ಸಸ್ಯವರ್ಗ ಮತ್ತು ವನ್ಯಜೀವಿಗಳ ಬಗ್ಗೆ ಮಾಹಿತಿ ನೀಡಿದರು.

ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ

ಪ್ರಧಾನಿ ಮೋದಿ ಆ ದೇಶದ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಭೇಟಿ ನೀಡಿದ್ದಾರೆ. ಈ ಭೇಟಿಯ ಉದ್ದೇಶ ಉಭಯ ದೇಶಗಳ ನಡುವಿನ ಸಹಕಾರ ಮತ್ತು ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿದೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ, ಹಲವು ಹಿರಿಯ ಸಚಿವರು ಮತ್ತು ಇತರ ಉನ್ನತ ಅಧಿಕಾರಿಗಳು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದು ಅವರ ಗೌರವಾರ್ಥವಾಗಿ ನೀಡಲಾದ ವಿಶೇಷ ಸ್ವಾಗತವಾಗಿತ್ತು.

ವಿಮಾನ ನಿಲ್ದಾಣದಲ್ಲಿ ಕಛ್ ಸಂಸ್ಕೃತಿಯ ಝಲಕ್

ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲಾಯಿತು. ಇದರಲ್ಲಿ ಗುಜರಾತ್‌ನ ಕಛ್ ಪ್ರಾಂತ್ಯದ ಸಾಂಪ್ರದಾಯಿಕ ನೃತ್ಯವೂ ಸೇರಿತ್ತು. ಈ ಬಗ್ಗೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್’ (ಟ್ವಿಟರ್) ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

“ಇದು ಅದ್ಭುತ ಸಾಂಸ್ಕೃತಿಕ ನಂಟು. ಸೆಶೆಲ್ಸ್ ವಿಮಾನ ನಿಲ್ದಾಣದಲ್ಲಿ ಸ್ವಾಗತದ ವೇಳೆ ಕಛ್ ನೃತ್ಯವೂ ಕಂಡುಬಂದಿತು. ಭಾರತದ ವಿವಿಧ ಭಾಗಗಳ ಸಂಸ್ಕೃತಿಯನ್ನು ನಮ್ಮ ಅನಿವಾಸಿ ಭಾರತೀಯ ಸಮುದಾಯವು ಕಾಪಾಡಿಕೊಂಡು ಬಂದಿರುವ ಮತ್ತು ಮುನ್ನಡೆಸುತ್ತಿರುವ ರೀತಿ ಶ್ಲಾಘನೀಯವಾಗಿದೆ.”

ಅವರು ವಿಮಾನ ನಿಲ್ದಾಣದಲ್ಲಿ ದೊರೆತ ಆತ್ಮೀಯ ಸ್ವಾಗತದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾರತೀಯ ಸಮುದಾಯದ ಪ್ರೀತಿ ಹಾಗೂ ಸ್ನೇಹಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ, “ಸೆಶೆಲ್ಸ್ ತಲುಪಿದ್ದೇನೆ. ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರು ನೀಡಿದ ಆತ್ಮೀಯ ಸ್ವಾಗತಕ್ಕೆ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸೆಶೆಲ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಮ್ಮ ಪ್ರಮುಖ ಸಮುದ್ರ ಪಾಲುದಾರ ಮತ್ತು ಆಪ್ತ ಮಿತ್ರ ರಾಷ್ಟ್ರವಾಗಿದೆ. ಈ ಭೇಟಿಯು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಮತ್ತು ನಮ್ಮ ಜನರ ಹಿತದೃಷ್ಟಿಯಿಂದ ಸಹಕಾರವನ್ನು ಹೆಚ್ಚಿಸಲಿದೆ ಎಂಬ ವಿಶ್ವಾಸ ನನಗಿದೆ” ಎಂದು ಬರೆದಿದ್ದಾರೆ.(ಏಜೆನ್ಸಿಸ್)

RELATED ARTICLES
- Advertisment -
Google search engine

Most Popular