ನವದೆಹಲಿ : ಹಿಂದೂ ಮಹಾಸಾಗರದಲ್ಲಿ ಕರಾವಳಿ ಭದ್ರತೆ ಮತ್ತು ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಸೆಶೆಲ್ಸ್‌ಗೆ ‘ಮೇಡ್ ಇನ್ ಇಂಡಿಯಾ’ ವೇಗದ ಗಸ್ತು ನೌಕೆ (ಫಾಸ್ಟ್ ಪೆಟ್ರೋಲ್ ವೆಸೆಲ್ – FPV) ‘ಪಿಎಸ್ ಲೆಸ್ಪ್ವಾರ್’ (PS Lespoir) ಅನ್ನು ಹಸ್ತಾಂತರಿಸಿದೆ. ಸೆಶೆಲ್ಸ್ ಕರಾವಳಿ ರಕ್ಷಣಾ ಪಡೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರಿಗೆ ಈ ನೌಕೆಯನ್ನು ಹಸ್ತಾಂತರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೆಶೆಲ್ಸ್ ಪ್ರವಾಸದ ವೇಳೆ ಉಭಯ ದೇಶಗಳ ಸಹಕಾರದ ಸಂಕೇತವಾಗಿ ಭಾರತದ ಪರವಾಗಿ ಈ ನೌಕೆಯನ್ನು ಸೆಶೆಲ್ಸ್ ಕರಾವಳಿ ರಕ್ಷಣಾ ಪಡೆಗೆ ನೀಡಿದರು. ಈ ಹೈ-ಸ್ಪೀಡ್ ನೌಕೆಯು ಕಡಲ ಮೇಲ್ವಿಚಾರಣೆ, ಕಳ್ಳಸಾಗಣೆ ತಡೆಗಟ್ಟುವಿಕೆ ಮತ್ತು ಕಡಲ್ಗಳ್ಳತನವನ್ನು (ಪೈರಸಿ) ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ, “ಒಂದು ವಿಶೇಷ ಉಪಕ್ರಮದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಡ್ ಇನ್ ಇಂಡಿಯಾ’ ವೇಗದ ಗಸ್ತು ನೌಕೆ ‘ಪಿಎಸ್ ಲೆಸ್ಪ್ವಾರ್’ ಅನ್ನು ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಎಫ್‌ಪಿವಿ ಸೇಶೆಲ್ಸ್‌ನ ಕಡಲ ಮೇಲ್ವಿಚಾರಣೆ ಮತ್ತು ಅದರ ವಿಶೇಷ ಆರ್ಥಿಕ ವಲಯದ (EEZ) ಗಸ್ತು ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ,” ಎಂದು ಬರೆದಿದ್ದಾರೆ.
ಇದು ಹೆಚ್ಚಿನ ವೇಗದ ಗಸ್ತು ನೌಕೆಯಾಗಿದ್ದು, ಸೇಶೆಲ್ಸ್‌ನ ನೌಕಾಯಾನ ಸುರಕ್ಷತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಕಡಲ ಸುರಕ್ಷತೆಯ ದೃಷ್ಟಿಯಿಂದ ಗಸ್ತು ನೌಕೆಗಳು ಅತ್ಯಂತ ಪ್ರಮುಖವಾಗಿವೆ. ಈ ವೇಗದ ನೌಕೆಯು ಸೆಶೆಲ್ಸ್‌ನ ಕಡಲ ಭದ್ರತೆ ಮತ್ತು ಅದರ ವಿಶೇಷ ಆರ್ಥಿಕ ವಲಯದಲ್ಲಿ (EEZ) ಗಸ್ತು ತಿರುಗುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಕಡಲ್ಗಳ್ಳರು ಮತ್ತು ಸಮುದ್ರದ ಮೂಲಕ ನಡೆಯುವ ಕಳ್ಳಸಾಗಣೆಯನ್ನು ತಡೆಯಲು ಇಂತಹ ಗಸ್ತು ನೌಕೆಗಳ ಅಗತ್ಯತೆ ಹೆಚ್ಚಾಗಿರುತ್ತದೆ. ಭಾರತದ ಈ ಕೊಡುಗೆಯು ಸೆಶೆಲ್ಸ್‌ನ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಲಿದೆ.
ಭಾರತದ ‘ಮಹಾಸಾಗರ್’ ವಿಷನ್
ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಭಾರತದ ‘ಮಹಾಸಾಗರ್’ ದೂರದೃಷ್ಟಿಯ ಅಡಿಯಲ್ಲಿ ಭಾರತ ಮತ್ತು ಸೇಶೆಲ್ಸ್ ತಮ್ಮ ಬಲವಾದ ರಕ್ಷಣಾ ಪಾಲುದಾರಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿವೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುತ್ತದೆ. ಭಾರತವು ತನ್ನ ‘ಮಹಾಸಾಗರ್’ ವಿಷನ್ ಅಡಿಯಲ್ಲಿ ಸುರಕ್ಷಿತ ನೌಕಾಯಾನಕ್ಕೆ ನಿರಂತರವಾಗಿ ಒತ್ತು ನೀಡುತ್ತಾ ಬಂದಿದೆ. ಇದರ ಭಾಗವಾಗಿಯೇ ಈ ಕಡಲ ಗಸ್ತು ನೌಕೆಯನ್ನು ಹಸ್ತಾಂತರಿಸಲಾಗಿದೆ. ಈ ನೌಕೆಯನ್ನು ಭಾರತದ ಗೋವಾ ಶಿಪ್‌ಯಾರ್ಡ್ ಉಸ್ತುವಾರಿಯಲ್ಲಿ ಸಿದ್ಧಪಡಿಸಲಾಗಿದೆ.
ಪ್ರಧಾನಿ ಮೋದಿ ಅವರು ಸೆಶೆಲ್ಸ್‌ಗೆ ಆರು ಆಂಬ್ಯುಲೆನ್ಸ್‌ಗಳು, ಹತ್ತು ಯುಟಿಲಿಟಿ ವಾಹನಗಳು ಮತ್ತು ಐದು ಲೇಸರ್ ರೇಡಿಯಲ್ ಬೋಟ್‌ಗಳನ್ನು ಸಹ ಹಸ್ತಾಂತರಿಸಿದ್ದಾರೆ ಎಂದು ವಕ್ತಾರ ಜೈಸ್ವಾಲ್ ತಿಳಿಸಿದ್ದಾರೆ. ಈ ಸೌಲಭ್ಯಗಳು ಸೆಶೆಲ್ಸ್‌ನ ಅಭಿವೃದ್ಧಿ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಕೊಡುಗೆ ನೀಡಲಿವೆ. (ಏಜೆನ್ಸಿಸ್)



