ಬೆಂಗಳೂರು : ಅಧಿಕೃತ ಮಾಹಿತಿಯ ಅನಧಿಕೃತ ಬಹಿರಂಗಪಡಿಸುವಿಕೆಯನ್ನು ತಡೆಯಲು ಕರ್ನಾಟಕ ಡಿಜಿಪಿ ಎಂ.ಎ. ಸಲೀಂ ಹೊಸ ಸುತ್ತೋಲೆ ಹೊರಡಿಸಿದ್ದಾರೆ. ಇದರಂತೆ, ರಾಜ್ಯ ಮಟ್ಟದಲ್ಲಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಥವಾ ಅವರ ಅನುಪಸ್ಥಿತಿಯಲ್ಲಿ ಡಿಐಜಿಪಿ ಮಾತ್ರ ಅಧಿಕೃತ ವಕ್ತಾರರಾಗಿರುತ್ತಾರೆ. ಜಿಲ್ಲೆಗಳಲ್ಲಿ ಎಸ್‌ಪಿ, ನಗರಗಳಲ್ಲಿ ಪೊಲೀಸ್ ಆಯುಕ್ತರು ಅಥವಾ ಅಧಿಕಾರ ಪಡೆದ ಹಿರಿಯ ಅಧಿಕಾರಿಗಳು ಮಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡಬಹುದು. ಇತರ ಪೊಲೀಸ್ ಸಿಬ್ಬಂದಿ ಲಿಖಿತ ಅನುಮತಿ ಇಲ್ಲದೆ ಹೇಳಿಕೆ, ಸಂದರ್ಶನ ಅಥವಾ ಚರ್ಚೆಗಳಲ್ಲಿ ಭಾಗವಹಿಸುವುದು ನಿಷೇಧಿಸಲಾಗಿದೆ. ಅಪರಾಧ ತನಿಖೆ, ಇಲಾಖಾ ವಿಚಾರಗಳು ಹಾಗೂ ಅಧಿಕೃತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಹ ಪೂರ್ವಾನುಮತಿ ಕಡ್ಡಾಯವಾಗಿದೆ. ಆದರೆ ಪ್ರಕೃತಿ ವಿಕೋಪ, ಸಂಚಾರ ಬದಲಾವಣೆ, ರಕ್ಷಣಾ ಕಾರ್ಯಾಚರಣೆ ಹಾಗೂ ತುರ್ತು ಕಾನೂನು ಸುವ್ಯವಸ್ಥೆ ಸಂದರ್ಭಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.



