Wednesday, July 1, 2026
Google search engine

Homeರಾಜಕೀಯಸಿಎಂ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಗೆ ಕಾಂಗ್ರೆಸ್ ಶಾಸಕರೇ ವಿರೋಧ

ಸಿಎಂ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಗೆ ಕಾಂಗ್ರೆಸ್ ಶಾಸಕರೇ ವಿರೋಧ

ತುಮಕೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗೆ ಕಾಂಗ್ರೆಸ್ ಶಾಸಕ ಎಸ್‌.ಆರ್‌. ಶ್ರೀನಿವಾಸ್ (ಗುಬ್ಬಿ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯೋಜನೆಗೆ ತಮ್ಮ ವಿರೋಧವನ್ನು ಮೀರಿ ಕಾಮಗಾರಿ ಆರಂಭಿಸಿದರೆ ಕಾಂಗ್ರೆಸ್‌ನಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ಮರುಚಿಂತನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಕ್ ಕೆನಾಲ್ (ಎಕ್ಸ್‌ಪ್ರೆಸ್ ಕೆನಾಲ್) ಯೋಜನೆಗೆ ವಿರೋಧವೇ ತಾವು ಈ ಹಿಂದೆ ಜೆಡಿಎಸ್ ತೊರೆಯಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎಂದಿದ್ದಾರೆ.

ನಾನು ಸಚಿವನಾಗಿದ್ದಾಗ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆಗ ನಾನು ಈ ಕಾಮಗಾರಿ ಬೇಡ ಎಂದು ಕ್ಯಾಬಿನೆಟ್ ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದೆ. ನಮ್ಮ ಅಭಿಪ್ರಾಯಕ್ಕೆ ಬೆಲೆ ಸಿಗದ ಕಾರಣವೇ ಪಕ್ಷ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ನೆನಪಿಸಿಕೊಂಡರು.

ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ ತಾವು ಈ ವಿಷಯವನ್ನು ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಕಾಲುವೆ ಮೂಲಕ ನೀರು ಸಾಗಿಸುವ ಪರ್ಯಾಯ ಮಾರ್ಗದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದೇನೆ. ನಮ್ಮ ಅಭಿಪ್ರಾಯಕ್ಕೆ ಎಷ್ಟು ಮೌಲ್ಯ ಸಿಗುತ್ತದೆ ಎಂಬುದನ್ನು ಕಾದು ನೋಡುತ್ತೇನೆ. ಯೋಜನೆ ಆರಂಭಿಸಿದರೆ ಪ್ರತಿಭಟನೆಗಳು ನಡೆಯುವುದು ಖಚಿತ. ನಾನು ಕಾಂಗ್ರೆಸ್‌ನಲ್ಲಿ ಇದ್ದು ಬೀದಿಗಿಳಿದು ಹೋರಾಟ ನಡೆಸುವುದು ಸರಿಯಲ್ಲ ಎಂದು ನನ್ನ ಹಿತೈಷಿಗಳು ಸಲಹೆ ನೀಡಿದ್ದಾರೆ. ಆದ್ದರಿಂದ ನನ್ನ ವಿರೋಧವನ್ನು ತಲುಪಬೇಕಾದ ಎಲ್ಲ ಕಡೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಹೇಳಿದರು.

ಇನ್ನೂ ಯೋಜನೆ ಅನುಷ್ಠಾನಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಯೋಜನೆ ಬೆಟ್ಟಕ್ಕೆ ಕಲ್ಲು ಹೊತ್ತಂತಾಗುತ್ತದೆ. ಸ್ಥಳೀಯ ಜನರೂ ಇದನ್ನು ಒಪ್ಪುವುದಿಲ್ಲ. ಮುಂದಿನ ಬೆಳವಣಿಗೆಗಳನ್ನು ಗಮನಿಸಿ ಕಾಲಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular