Wednesday, July 1, 2026
Google search engine

Homeದೇಶದೆಹಲಿಯಲ್ಲಿ 6 ಲೇನ್‌ ನ ದ್ವಾರಕಾ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರದ ಅನುಮೋದನೆ

ದೆಹಲಿಯಲ್ಲಿ 6 ಲೇನ್‌ ನ ದ್ವಾರಕಾ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರದ ಅನುಮೋದನೆ

ನವದೆಹಲಿ : ದೆಹಲಿಯ ಸಾರಿಗೆ ಸಂಪರ್ಕವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು ವಸಂತ ಕುಂಜದ ನೆಲ್ಸನ್ ಮಂಡೇಲಾ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ 6 ಲೇನ್‌ನ ರಸ್ತೆ ಸುರಂಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಸುಮಾರು 6,969 ಕೋಟಿ ರೂ. ವೆಚ್ಚದಲ್ಲಿ 8.1 ಕಿಲೋಮೀಟರ್ ಉದ್ದದ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಯೋಜನೆಯು ಪಶ್ಚಿಮ ಮತ್ತು ದಕ್ಷಿಣ ದೆಹಲಿಯ ನಡುವೆ ವೇಗದ ಸಂಪರ್ಕವನ್ನು ಒದಗಿಸಲಿದೆ. ಅರ್ಬನ್ ಎಕ್ಸ್‌ಟೆನ್ಶನ್ ರೋಡ್ 2 (UER-2) ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು ವಸಂತ ಕುಂಜದೊಂದಿಗೆ ಇದು ಜೋಡಿಸುತ್ತದೆ. ನೆಲ್ಸನ್ ಮಂಡೇಲಾ ಮಾರ್ಗದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು 1.8 ಕಿಮೀ ಉದ್ದದ ಎತ್ತರದ ರಸ್ತೆಯನ್ನು (Elevated Road) ನಿರ್ಮಿಸಲು ಪ್ರಸ್ತಾವಿಸಲಾಗಿದೆ.

ಈ ಯೋಜನೆಯಿಂದ ಸುಮಾರು 7.54 ಲಕ್ಷ ನೇರ ಉದ್ಯೋಗ ದಿನಗಳು ಮತ್ತು 9.80 ಲಕ್ಷ ಪರೋಕ್ಷ ಉದ್ಯೋಗ ದಿನಗಳ ಸೃಷ್ಟಿಯಾಗಲಿದೆ.
ಎಮ್ಸ್ (AIIMS) ಮತ್ತು ಮಹಿಪಾಲ್‌ಪುರ ನಡುವೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆಯನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಿಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾನ್ಪುರ-ಕಬ್ರೈ ನಡುವೆ ನೂತನ ಹೆದ್ದಾರಿ ಯೋಜನೆ

ಇದೇ ವೇಳೆ ಉತ್ತರ ಪ್ರದೇಶದಲ್ಲಿ 7,145 ಕೋಟಿ ರೂ. ವೆಚ್ಚದ 117.7 ಕಿಮೀ ಉದ್ದದ 4/6 ಲೇನ್‌ನ ಕಾನ್ಪುರ-ಕಬ್ರೈ ಹೆದ್ದಾರಿ (NH-34) ನಿರ್ಮಾಣಕ್ಕೂ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಗಂಟೆಗೆ 80 ರಿಂದ 100 ಕಿಮೀ ವೇಗದಲ್ಲಿ ಸಂಚರಿಸಲು ವಿನ್ಯಾಸಗೊಳಿಸಲಾದ ಈ ಕಾರಿಡಾರ್‌ನಿಂದಾಗಿ, ಕಾನ್ಪುರ ಮತ್ತು ಕಬ್ರೈ ನಡುವಿನ ಪ್ರಯಾಣದ ಸಮಯ 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ.

ಈ ಹೆದ್ದಾರಿಯು ಬುಂದೇಲ್‌ ಖಂಡ್ ಎಕ್ಸ್‌ಪ್ರೆಸ್‌ವೇ, ಕಾನ್ಪುರ ರಿಂಗ್ ರಸ್ತೆ ಹಾಗೂ ಮಧ್ಯಪ್ರದೇಶದ ಸಾಗರ ಮತ್ತು ಭೋಪಾಲ್‌ನಂತಹ ನಗರಗಳಿಗೆ ಸಂಪರ್ಕವನ್ನು ಬಲಪಡಿಸಲಿದೆ. ಈ ಯೋಜನೆಯಿಂದ ಸುಮಾರು 1.2 ಕೋಟಿ ನೇರ ಮತ್ತು ಪರೋಕ್ಷ ಉದ್ಯೋಗ ದಿನಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಅಭಿವೃದ್ಧಿ ಕಾರ್ಯಗಳು ದೆಹಲಿ ಮತ್ತು ಉತ್ತರ ಪ್ರದೇಶದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದ್ದು, ನಾಗರಿಕರಿಗೆ ಸುಗಮ ಸಂಚಾರವನ್ನು ಒದಗಿಸಲಿವೆ.

RELATED ARTICLES
- Advertisment -
Google search engine

Most Popular