ರಾಮನಗರ ಹಾಗೂ ಬೆಂಗಳೂರು ದಕ್ಷಿಣ ಭಾಗದ ಅಭಿವೃದ್ಧಿ ಮತ್ತು ಬಿಡದಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿಸದೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್‌ಗೆ ಭೂಸ್ವಾಧೀನ ಮಾಡಿದ್ದು ನಾನಲ್ಲ. ಆ ಯೋಜನೆ ರೂಪಿಸಿದ್ದು ಅವರೇ. ಆಗ ಡಿನೋಟಿಫಿಕೇಷನ್ ಮಾಡಲು ಅವಕಾಶ ಇದ್ದರೂ ಮಾಡಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಮುಂದಿಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಹಿಂದೆ ತಮ್ಮ ವಿರುದ್ಧ ಎಸೆದ ಸವಾಲುಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಿಮ್ಮ ಎಲ್ಲ ಸವಾಲುಗಳನ್ನು ನಾನು ಸ್ವೀಕರಿಸಿದ್ದೆ. ಇಬ್ಬರೂ ಕುಳಿತು ಚರ್ಚೆ ಮಾಡೋಣ ಎಂದು ಆಹ್ವಾನಿಸಿದ್ದರೂ ಅವರು ಬರಲಿಲ್ಲ. ವಿಧಾನಸೌಧಕ್ಕೆ ಕರೆದಾಗ ಬರದವರು ಈಗ ಬೇರೆಡೆಗೆ ಕರೆಯುತ್ತಿದ್ದಾರೆ. ಈಗ ಅವರೊಂದಿಗೆ ಯಾವುದೇ ಚರ್ಚೆ ಮಾಡುವ ಅಗತ್ಯವಿಲ್ಲ. ಅವರು ಕ್ಷೇತ್ರ ಬಿಟ್ಟಿದ್ದಾರೆ, ಈಗ ಈ ವಿಚಾರಕ್ಕೂ ಅವರಿಗೆ ಸಂಬಂಧವಿಲ್ಲ ಎಂದು ಹೇಳಿದರು.
ಅಲ್ಲದೆ ಟೌನ್‌ಶಿಪ್ ಯೋಜನೆಯಿಂದ ಗ್ರಾಮಗಳು ಸ್ಥಳಾಂತರವಾಗಲಿವೆ ಎಂಬ ಆತಂಕವನ್ನು ತಳ್ಳಿಹಾಕಿದ ಅವರು, ಯಾವ ಗ್ರಾಮವನ್ನೂ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಗ್ರಾಮಗಳು ತಮ್ಮ ಸ್ಥಳದಲ್ಲೇ ಇರುತ್ತವೆ. ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಈಗಾಗಲೇ ಎರಡು-ಮೂರು ಗ್ರಾಮಗಳ ಡಿನೋಟಿಫಿಕೇಷನ್ ಆಗಿದೆ. ಭೂಸ್ವಾಧೀನಕ್ಕೆ ಒಳಗಾಗುವವರಿಗೆ ಸರ್ಕಾರ ನ್ಯಾಯಯುತ ಪರಿಹಾರ ನೀಡಲಿದೆ. ಜೊತೆಗೆ ಪ್ರತ್ಯೇಕ ರಿಂಗ್‌ರೋಡ್ ನಿರ್ಮಾಣವೂ ಯೋಜನೆಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ರಚನೆಯಿಂದ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ಭಾಗಗಳ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದ ಅವರು, ರಾಮನಗರಕ್ಕೆ ಜಿಲ್ಲಾ ಕೇಂದ್ರವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯ ಮತ್ತು ಗೌರವವನ್ನು ಸರ್ಕಾರ ಒದಗಿಸಲಿದೆ ಹಾಗೂ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ, ಬೇರೆ ಪಕ್ಷಗಳ ಹಲವು ನಾಯಕರು ಕಾಂಗ್ರೆಸ್ ಸೇರುವ ಆಸಕ್ತಿ ತೋರಿಸುತ್ತಿದ್ದಾರೆ. ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸಬೇಕು. ಸರ್ಕಾರದ ಜನಪರ ಕಾರ್ಯಕ್ರಮಗಳಿಂದ ವಿರೋಧ ಪಕ್ಷಗಳಿಗೆ ಅಸಹನೆ ಉಂಟಾಗಿದೆ. ಕಾರ್ಯಕರ್ತರ ವಿಶ್ವಾಸ ಉಳಿಸಿಕೊಂಡು ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.



