ತುಮಕೂರು : ಬರುವ ಅಕ್ಟೋಬರ್ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರನ್ನು ತುಮಕೂರಿನವರೆಗೆ ಹರಿಸುವ ಗುರಿ ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದು, ಉಳಿದಿರುವ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಗುಬ್ಬಿ ತಾಲೂಕಿನ ಪ್ಯಾಕೇಜ್–11 ವ್ಯಾಪ್ತಿಯ ಕಂಚಿಗಾನಹಳ್ಳಿ ಹಾಗೂ ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಯೋಜನೆಯ ಒಟ್ಟು 252 ಕಿ.ಮೀ. ಕಾಮಗಾರಿಯಲ್ಲಿ ಈಗಾಗಲೇ 220 ಕಿ.ಮೀ. ಪೂರ್ಣಗೊಂಡಿದ್ದು, 23 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ 9 ಕಿ.ಮೀ. ಪೈಕಿ 6 ಕಿ.ಮೀ. ಅರಣ್ಯ ಪ್ರದೇಶದಲ್ಲಿದ್ದ ಕಾರಣ ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಅರಣ್ಯ ಸಂಬಂಧಿತ ಸಮಸ್ಯೆ ಇತ್ಯರ್ಥಗೊಂಡಿರುವುದರಿಂದ ಅಡ್ಡಿ ನಿವಾರಣೆಯಾಗಿದೆ ಎಂದು ಹೇಳಿದರು.
ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ 1.9 ಕಿ.ಮೀ. ಕಾಲುವೆ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಅರಣ್ಯ ಜೀವಿಗಳಿಗೆ ಹಾನಿಯಾಗದಂತೆ ಮುಚ್ಚಿದ ಕಾಲುವೆ ನಿರ್ಮಿಸುವ ಷರತ್ತಿನಡಿ ಮರ ತೆರವಿಗೆ ಕಾರ್ಯಾದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ತಕ್ಷಣ ಆರಂಭಿಸಿ ಮುಂದಿನ 100 ದಿನಗಳಲ್ಲಿ ಒಟ್ಟಾರೆ 174 ಕಿ.ಮೀ. ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇನ್ನು ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯ ಭಾರತದ ಸುಮಾರು 12 ರಾಜ್ಯಗಳಲ್ಲಿ ಸಹ ಮಳೆಯ ಕೊರತೆ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಹುತೇಕ ಕೆರೆ-ಕಟ್ಟೆಗಳು ತುಂಬಿದ್ದವು. ಪ್ರಸ್ತುತ ಎರಡು ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ ಕೃಷಿಗೆ ಉತ್ತಮ ಮಳೆಯ ಅಗತ್ಯವಿದೆ ಎಂದು ಹೇಳಿದರು.
ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕುರಿತು ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪರಿಶೀಲನಾ ಸಂದರ್ಭದಲ್ಲಿ ಹೇಮಾವತಿ ನಾಲಾ ಯೋಜನೆಯ ಮುಖ್ಯ ಇಂಜಿನಿಯರ್ ಹೆಚ್.ಎಸ್.ಆನಂದ್, ಕಾರ್ಯಪಾಲಕ ಇಂಜಿನಿಯರ್ ಮುರುಳೀಧರ್, ಸಹಾಯಕ ಇಂಜಿನಿಯರ್ ಶಶಾಂಕ್, ತಹಶೀಲ್ದಾರ್ ಆರತಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.



