ಬೆಂಗಳೂರು : ದೇಶಾದ್ಯಂತ ವಿವಾದಕ್ಕೆ ಕಾರಣವಾಗಿರುವ NEET ಪರೀಕ್ಷೆ ಹಗರಣ ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಾರ್ಯದರ್ಶಿ ಅಭಿಷೇಕ್ ದತ್ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ, ಯುವ ಪೀಳಿಗೆಯನ್ನು ಆತ್ಮಹತ್ಯೆಯತ್ತ ದೂಡುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಶ್ರಮಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಎತ್ತಿದ ಅವರು, ವೈದ್ಯರಾಗಬೇಕೆಂಬ ಕನಸು ಹೊತ್ತು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ವರ್ಷಗಟ್ಟಲೆ ಕಠಿಣ ಪರಿಶ್ರಮ ಪಡುತ್ತಾರೆ. ಹಾಸ್ಟೆಲ್ಗಳಲ್ಲಿ ವಾಸಿಸಿ ದಿನರಾತ್ರಿ ಅಧ್ಯಯನ ಮಾಡುತ್ತಾರೆ. ಆದರೆ ಪೇಪರ್ ಲೀಕ್ ಮುಂತಾದ ಸಮಸ್ಯೆಗಳ ಕಾರಣದಿಂದ ಮತ್ತೆ ಪರೀಕ್ಷೆ ಬರೆಯುವಂತೆ ಹೇಳುವುದು ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆಯಾಗಿದೆ ಎಂದು ಹೇಳಿದರು.
ಇದರಿಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳತ್ತ ಹೋಗುತ್ತಿರುವುದು ಆತಂಕಕಾರಿ ಸಂಗತಿ ಎಂದರಲ್ಲದೆ, ನೀಟ್ ಅಕ್ರಮದ ವಿರುದ್ಧ ಆಗಸ್ಟ್ 9ರಂದು ಕಾಂಗ್ರೆಸ್ ದೇಶವ್ಯಾಪಿ ಬೃಹತ್ ಪ್ರತಿಭಟನೆ ಹಾಗೂ ಕ್ಯಾಂಪೇನ್ ನಡೆಸಲಿದೆ ಎಂದು ಅಭಿಷೇಕ್ ದತ್ ಪ್ರಕಟಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು ಇವಿಎಂ ಮೂಲಕ ಮತದಾನ ಅಕ್ರಮದ ಆರೋಪಗಳಿದ್ದು, ಈಗ ರಾಮಮಂದಿರಕ್ಕೆ ಬಂದ ಹಣದಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಸರ್ಕಾರ ಭಕ್ತರು ಹಾಗೂ ವಿದ್ಯಾರ್ಥಿಗಳ ಭಾವನೆಗಳೊಂದಿಗೆ ದ್ರೋಹ ಮಾಡುತ್ತಿದೆ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಕೂಡ ಉಪಸ್ಥಿತರಿದ್ದು, ವಿದ್ಯಾರ್ಥಿ ಸಂಘಟನೆಯ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.



